ಕರ್ನಾಟಕ

karnataka

ETV Bharat / state

ಸ್ಥಗಿತಗೊಂಡಿದ್ದ 2,934 ಕಲಾವಿದರ ಮಾಸಾಶನವನ್ನು 15 ದಿನದೊಳಗೆ ಇತ್ಯರ್ಥಪಡಿಸಲು ಸಚಿವ ಸಿ.ಟಿ. ರವಿ ಸೂಚನೆ - Minister CT Ravi

ವಿಧಾನಸೌಧದಲ್ಲಿ ಇಂದು ಸಚಿವ ಸಿ.ಟಿ. ರವಿ ಅವರು ವಿವಿಧ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಪ್ರಾಧಿಕಾರಗಳ ಅಧ್ಯಕ್ಷರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

meeting
ಸಭೆ

By

Published : Sep 9, 2020, 9:17 PM IST

ಬೆಂಗಳೂರು:ಹಲವಾರು ಕಾರಣಗಳಿಂದ ಸ್ಥಗಿತಗೊಂಡಿದ್ದ ನಾಡಿನ 2,934 ಕಲಾವಿದರ ಮಾಸಾಶನವನ್ನು 15 ದಿನದೊಳಗೆ ಇತ್ಯರ್ಥಪಡಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು ವಿವಿಧ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಪ್ರಾಧಿಕಾರಗಳ ಅಧ್ಯಕ್ಷರೊಂದಿಗೆ ಸತತ ಮೂರು ಗಂಟೆಗಳ ಕಾಲ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, 2,934 ಕಲಾವಿದರ ಮಾಸಾಶನ ಸ್ಥಗಿತಗೊಂಡಿದ್ದು, 15 ದಿನದೊಳಗೆ ಇದು ಇತ್ಯರ್ಥವಾಗಬೇಕು. ಯಾವುದೇ ಕಾರಣಕ್ಕೂ ವಿಳಂಬವಾಗಬಾರದೆಂದು ಸೂಚಿಸಿದರು.

ಕೋವಿಡ್-19 ಪರಿಣಾಮದಿಂದ ಸಂಕಷ್ಟಕ್ಕೆ ಸಿಲುಕಿದ್ದ ಕಲಾವಿದರಿಗೆ ಅಕಾಡೆಮಿಗಳ ವತಿಯಿಂದ 3.45 ಕೋಟಿ ಹಣವನ್ನು ಪಾವತಿ ಮಾಡಲಾಗಿದೆ. ತಕ್ಷಣವೇ ಸರ್ಕಾರದಿಂದ ಆಕಾಡಮಿಗಳಿಗೆ ಬಿಡುಗಡೆ ಮಾಡಲು ಸರ್ಕಾರದ ಕಾರ್ಯದರ್ಶಿಗಳಿಗೆ ಆದೇಶಿಸಿದರು.

ಕಳೆದ ಮೂರು ವರ್ಷಗಳಿಂದ ಕೆಲವು ಅಕಾಡೆಮಿಗಳಲ್ಲಿ ಬಾಕಿ ಇರುವ ವಾರ್ಷಿಕ ಪ್ರಶಸ್ತಿಗಳನ್ನು ಅರ್ಹರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಪುನಃ ಕಾರಣಗಳನ್ನು ನೀಡಬಾರದು ಎಂದು ಸಚಿವ ರವಿ ಅವರು ತಾಕೀತು ಮಾಡಿದರು. ಗಡಿ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ತುಳು, ಕೊಂಕಣಿ, ಬ್ಯಾರಿ ಹಾಗೂ ಕೊಡಗಿನ ಸಾಂಸ್ಕೃತಿಕ ಸಮುಚ್ಚಯ ಭವನ ನಿರ್ಮಾಣಕ್ಕೆ ಬಿಡುಗಡೆ ಮಾಡಿರುವ ಅನುದಾನ ಬಳಸಿ ನೆನೆಗುದಿಗೆ ಬಿದ್ದಿರುವ ಕಟ್ಟಡಗಳನ್ನು ಕಾಲ ಮಿತಿಯೊಳಗೆ ಪೂರ್ಣಗೊಳಿಸಬೇಕು. ಶೀಘ್ರದಲ್ಲೇ ಇವುಗಳು ಕಾರ್ಯಾರಂಭ ಮಾಡುವಂತೆ ಆದೇಶಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇ-ತಂತ್ರಾಂಶ ಬಳಸಿ ಹಲವು ಕ್ರಿಯಾಶೀಲ ಕಾರ್ಯಕ್ರಮಗಳನ್ನು ರೂಪಿಸಲು ತಯಾರಿ ನಡೆಸಿದ್ದು, ನ.1ರಿಂದಲೇ ಜಾರಿಗೆ ತರಲು ಶೀಘ್ರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ನಿಮ್ಮ ನಿಮ್ಮ ಜಿಲ್ಲೆಗಳಲ್ಲಿರುವ ಇಲಾಖೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕೆಂದು ಸಲಹೆ ಮಾಡಿದರು. ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳ ವತಿಯಿಂದ ಮುದ್ರಿಸುವ ಪುಸ್ತಕಗಳು ಪುನರಾವರ್ತಿತವಾಗಬಾರದು. ಹೊಸ ಬರಹಗಾರರ ಪುಸ್ತಕಗಳಿಗೆ ಆದ್ಯತೆ ನೀಡಬೇಕೆಂದು ಸೂಚಿಸಿದರು.

ಸಿದ್ದತೆ ಕೈಗೊಳ್ಳಿ: ಈ ಬಾರಿ ಕೇಂದ್ರ ಸರ್ಕಾರದ ವತಿಯಿಂದ ರಾಷ್ಟ್ರಿಯ ಲಲಿತ ಕಲಾ ಮೇಳ ನಡೆಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಲಾಗಿದೆ. ನಮ್ಮ ರಾಜ್ಯದಲ್ಲೇ ಲಲಿತ ಕಲಾಮೇಳವನ್ನು ನಡೆಸಲು ಅಧಿಕಾರಿಗಳು ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕು. ಕರ್ನಾಟಕ ಸಾಂಸ್ಕೃತಿಕ ನೆಲೆಬೀಡಾಗಿದ್ದು, ನಮ್ಮಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಮೇಳ ಆಯೋಜಿಸಲು ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಬೇಕೆಂದು ಸಚಿವರು ತಿಳಿಸಿದರು.

ರಾಷ್ಟ್ರೀಯ ಲಲಿತ ಕಲಾಮೇಳ ಕರ್ನಾಟಕದಲ್ಲಿ ಆಯೋಜಿಸಲು ನಾವು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳೋಣ. ಈ ಸಂಬಂಧ ಕೇಂದ್ರ ಸಚಿವರಿಗೂ ಮನವರಿಕೆ ಮಾಡಿಕೊಡಬೇಕು. ಇದಕ್ಕಾಗಿ ವಿಸ್ತೃತ ವರದಿಯನ್ನು ಸಿದ್ದಪಡಿಸಬೇಕೆಂದು ಕಿವಿಮಾತು ಹೇಳಿದರು.

ದುರುಪಯೋಗವಾಗಬಾರದು: ಇನ್ನು ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ನೀಡುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವರ್ಷಪೂರ್ತಿ ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸಿ ಕನ್ನಡ ಭಾಷಾಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ. ಆದರೆ ಅನುದಾನ ದುರುಪಯೋಗವಾದರೆ ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿರಲಿ, ಅಂಥವರ ವಿರುದ್ದ ಶಿಸ್ತು ಕ್ರಮ ಜರುಗಿಸಲು ಹಿಂದೆಮುಂದೆ ನೋಡುವುದಿಲ್ಲ ಎಂದು ಸಚಿವರು ಗುಡುಗಿದರು.

ಕೋವಿಡ್ 19 ಪರಿಣಾಮ ಆರ್ಥಿಕ ಕುಸಿತ ಕಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಎಲ್ಲ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಪೂರ್ಣ ಪ್ರಮಾಣದ ಅನುದಾನವನ್ನು ಬಿಡುಗಡೆ ಮಾಡಲು ಸಾಧ್ಯವಾಗದಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚುಕಮ್ಮಿ ಸರಿಸಮಾನಗಿಯೇ ಅನುದಾನವನ್ನು ನೀಡಿದ್ದೇವೆ. ಈ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಕ್ರಿಯಾಶೀಲ ಚಟುವಟಿಕೆಗಳನ್ನು ನಡೆಸಬೇಕೆಂದು ಸಚಿವರು ಸೂಚಿಸಿದರು. ಇದೇ ವೇಳೆ 13 ಅಕಾಡೆಮಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕುವೆಂಪು ಭಾಷಾ ಭಾರತೀ ಪ್ರಾಧಿಕಾರ ಅಧ್ಯಕ್ಷರು ಮತ್ತು ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ABOUT THE AUTHOR

...view details