ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಹೆಲಿಟೂರಿಸಂ ಆರಂಭಿಸಲು ಶೀಘ್ರದಲ್ಲಿ ಮಹೂರ್ತ ನಿಗದಿ; ಸಚಿವ ಯೋಗೇಶ್ವರ್ - Minister cp yogeswar talk

ಪ್ರಥಮ ಹಂತದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಬಳ್ಳಾರಿ, ಹುಬ್ಬಳ್ಳಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಹೆಲಿಟೂರಿಸಂ ಆರಂಭಿಸುವಂತೆ ಸಚಿವರು ನಿರ್ದೇಶಿಸಿದರು.

Cp yogiswar
Cp yogiswar

By

Published : Apr 9, 2021, 4:05 PM IST

ಬೆಂಗಳೂರು: ರಾಜ್ಯದಲ್ಲಿ ಅತೀ ಶೀಘ್ರದಲ್ಲಿ ಹೆಲಿಟೂರಿಸಂ ಆರಂಭಿಸುವ ಸಂಬಂಧ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ‍್ವರ್ ಹೆಲಿಟೂರಿಸಂ ಕಂಪನಿಗಳಿಗೆ ಸೂಚಿಸಿದ್ದಾರೆ.

ಕುಮಾರ ಕೃಪ ಅತಿಥಿ ಗೃಹದಲ್ಲಿ ಪ್ರವಾಸೋದ್ಯಮ ಸಚಿವರ ನೇತೃತ್ವದಲ್ಲಿ ಹೆಲಿಟೂರಿಸಂ ಆರಂಭಿಸುವ ಸಂಬಂಧ ಮಹತ್ವದ ಸಭೆ ನಡೆಯಿತು.

ಈ ಸಭೆಯಲ್ಲಿ ಫ್ಲೈಬ್ಲೇಡ್‍ (Fly Blade), ಚಿಪ್ಸನ್‍ (Chipsan) ಮತ್ತು ಥಂಬಿ (Thumby) ಕಂಪನಿಗಳು ಪ್ರವಾಸಿಗರಿಗೆ ಹೆಲಿಟೂರಿಸಂ ಕಲ್ಪಿಸುವ ಸಂಬಂಧ ಪ್ರಾತ್ಯಕ್ಷಿಕೆಯನ್ನು ತೋರಿಸಿದರು.

ಮೊದಲಿಗೆ ರಾಜ್ಯದಲ್ಲಿ ಬಳಕೆಯಲ್ಲಿರುವ ಹೆಲಿಪ್ಯಾಡ್‍ ಹಾಗೂ ವಿಮಾನ ನಿಲ್ದಾಣಗಳನ್ನು ಬಳಸಿಕೊಂಡು ಹೆಲಿಟೂರಿಸಂ ಆರಂಭಿಸುವಂತೆ ಹಾಗೂ ಹೆಲಿಪ್ಯಾಡ್‍ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಲಾಂಜ್‍ಗಳನ್ನು ಸರ್ಕಾರವೇ ನಿರ್ಮಿಸಿಕೊಡಲಿದೆ ಎಂದು ಸಚಿವರು ತಿಳಿಸಿದರು.

ಅಷ್ಟೇ ಅಲ್ಲದೇ ಬೇಡಿಕೆಯಿರುವ ಸ್ಥಳಗಳಲ್ಲಿ ತ್ವರಿತವಾಗಿ ಹೆಲಿಪ್ಯಾಡ್‍ಗಳನ್ನು ನಿರ್ಮಿಸಿ ಅಗತ್ಯ ಅನುಮತಿಗಳನ್ನು ದೊರಕಿಸಿಕೊಡುವುದಾಗಿ ಸಹ ಇದೇ ವೇಳೆ ಸಚಿವ ಯೋಗೇಶ‍್ವರ ಹೇಳಿದರು.

ಪ್ರಥಮ ಹಂತದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಬಳ್ಳಾರಿ, ಹುಬ್ಬಳ್ಳಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಹೆಲಿಟೂರಿಸಂ ಆರಂಭಿಸುವಂತೆ ಸಚಿವರು ನಿರ್ದೇಶಿಸಿದರು. ಇದಕ್ಕೆ ಸ್ಪಂದಿಸಿದ ಹೆಲಿಟೂರಿಸಂ ಕಂಪನಿಗಳು ರಾಜ್ಯ ಸರ್ಕಾರವು ಪ್ರವಾಸಿ ಮಾರ್ಗಗಳನ್ನು ನಿಗದಿಪಡಿಸಿದ ತಕ್ಷಣ ಪ್ರವಾಸಿಗರಿಗೆ ಸೇವೆ ಒದಗಿಸಲು ಸಿದ್ಧವಿರುವುದಾಗಿ ತಿಳಿಸಿದರು.

ಹೆಲಿಟೂರಿಸಂ ಆರಂಭಿಸಲು ಪ್ರಾರಂಭದಲ್ಲಿ ಆಗಲಿರುವ ನಷ್ಟವನ್ನು ಭರಿಸುವಂತೆ ಹಾಗೂ ಇಂಧನ ಹಾಗೂ ಜಿ.ಎಸ್‍.ಟಿ.ಯಲ್ಲಿ ರಿಯಾಯಿತಿ ನೀಡುವಂತೆ ಹೆಲಿಟೂರಿಸಂ ಸೇವೆ ಒದಗಿಸುವ ಕಂಪನಿಗಳ ಪ್ರತಿನಿಧಿಗಳು ಮನವಿ ಮಾಡಿದರು. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ರಾಜ್ಯದ ಎಲ್ಲ ಸಚಿವರುಗಳು ಬೇರೆ - ಬೇರೆ ರಾಜ್ಯ ಹಾಗೂ ಕೇಂದ್ರದಿಂದ ರಾಜ್ಯಕ್ಕೆ ಆಗಮಿಸಲಿರುವ ಸಚಿವರುಗಳು ಹೆಲಿಕಾಪ್ಟರ್ ಸೇವೆಯನ್ನು ಬಳಸಿಕೊಂಡರೆ ಸಮಯವು ಉಳಿಯಲಿದ್ದು, ತಮಗೂ ಲಾಭವಾಗಲಿದೆ ಎಂದು ಹೆಲಿಟೂರಿಸಂ ಕಂಪನಿಗಳ ಪ್ರತಿನಿಧಿಗಳು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವ ಯೋಗೇಶ್ವರ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಹೆಲಿಟೂರಿಸಂ ಆರಂಭಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಅಗತ್ಯವಿರುವ ಎಲ್ಲ ರೀತಿಯ ಪರವಾನಗಿ ಹಾಗೂ ಅನುಮತಿಗಳನ್ನು ದೊರಕಿಸಿಕೊಡುವುದಾಗಿ ಸಹ ಸಚಿವ ಸಿ.ಪಿ.ಯೋಗೇಶ್ವರ ತಿಳಿಸಿದರು.

ಪ್ರವಾಸಿಗರಿಗೆ ಕಾರವಾನ್‍ ಸೌಲಭ್ಯ:

ರಾಜ್ಯದಲ್ಲಿರುವ ಎಲ್ಲ ವಿಮಾನ ನಿಲ್ದಾಣಗಳು ಹಾಗೂ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರಿಗೆ ಕಾರವಾನ್‍ ಸೌಲಭ್ಯವನ್ನು ಒದಗಿಸಲು ಸಹ ಸಭೆಯಲ್ಲಿ ನಿರ್ಧರಿಸಲಾಯಿತು.

ಮಂಜುನಾಥ ಅಟೋ ಮೊಬೈಲ್ಸ್ ಪ್ರೈ.ಲಿ, ಸಂಸ್ಥೆ ಹಾಗೂ ಲಕ್ಸೀ ಕ್ಯಾಂಪೇನ್‍ ಸಂಸ್ಥೆಗಳು ಕಾರವಾನ್‍ ಪ್ರವಾಸದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಒಂದು ಕಾರವಾನ್‍ಗೆ ಪ್ರತಿ ವರ್ಷ ರೂ.3.05 ಲಕ್ಷ, ರಸ್ತೆ ತೆರಿಗೆ ಪಾವತಿಸಬೇಕು. ಇದು ದುಬಾರಿಯಾಗಿದ್ದು, ರಸ್ತೆ ತೆರಿಗೆ ಪಾವತಿಯಲ್ಲಿ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದರು.

ಕಾರವಾನ್‍ ನಿರ್ಮಾಣಗಾರರ ಮನವಿಗೆ ಸ್ಪಂದಿಸಿದ ಸಚಿವರು ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಿ ಪ್ರವಾಸೋದ್ಯಮ ಇಲಾಖೆಯಲ್ಲಿ ಬಳಸಲಾಗುವ ಕಾರವಾನ್‍ಗಳಿಗೆ ರಸ್ತೆ ತೆರಿಗೆ ವಿನಾಯಿತಿ ಕೊಡಿಸುವುದಾಗಿ ಹೇಳಿದರು.

ಪ್ರಾಯೋಗಿಕವಾಗಿ ಒಂದು ಕಾರವಾನ್‍ ತ್ವರಿತವಾಗಿ ನಿರ್ಮಾಣ ಮಾಡುವಂತೆ ಸಚಿವರು ಸೂಚಿಸಿದರು. ಒಟ್ಟು 100 ಕಾರವಾನ್‍ಗಳನ್ನು ಪ್ರವಾಸೋದ್ಯಮ ಇಲಾಖೆಗೆ ಸೇರ್ಪಡೆ ಮಾಡುವುದಾಗಿ ಇದೇ ವೇಳೆ ಸಚಿವರು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಪಂಕಜ್‍ ಕುಮಾರ್ ಪಾಂಡೆ, ನಿರ್ದೇಶಕರಾದ ಸಿಂಧು ಬಿ.ರೂಪೇಶ್‍, ಕೆ.ಎಸ್.ಟಿ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕರಾದ ವಿಜಯ ಶರ್ಮ ಹಾಗೂ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕುಮಾರ ಪುಷ್ಕರ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details