ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ನಡೆಯುತ್ತಿರುವುದು ಸತ್ಯ, ಶೀಘ್ರವೇ ಸಮಸ್ಯೆ ಸರಿಪಡಿಸುತ್ತೇವೆ: ಸಚಿವ ಚಲುವರಾಯಸ್ವಾಮಿ - cauvery water dispute

ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ, ಲೋಡ್‌ ಶೆಡ್ಡಿಂಗ್‌ ಕುರಿತು​ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದರು.

ಸಚಿವ ಚಲುವರಾಯಸ್ವಾಮಿ
ಸಚಿವ ಚಲುವರಾಯಸ್ವಾಮಿ

By ETV Bharat Karnataka Team

Published : Oct 12, 2023, 4:38 PM IST

ಬೆಂಗಳೂರು: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆಗುತ್ತಿರುವುದು ಸತ್ಯ. ಭಾರಿ ಪ್ರಮಾಣದಲ್ಲಿ ವಿದ್ಯುತ್‌ ಸಮಸ್ಯೆ ಇದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಒಪ್ಪಿಕೊಂಡಿದ್ದಾರೆ. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ವಿದ್ಯುತ್ ಇಲಾಖೆಯಲ್ಲಿ ಸಮಸ್ಯೆಗಳಿವೆ. ಇದನ್ನು ಸಿಎಂ ಗಂಭೀರವಾಗಿ ತೆಗೆದುಕೊಂಡಿದ್ದು, ಸರಿಪಡಿಸುತ್ತೇವೆ ಎಂದು ತಿಳಿಸಿದರು.

ಹೆಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಚಿವರು, ಸರ್ಕಾರಕ್ಕೆ ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶ ಧಿಕ್ಕರಿಸುವ ಎದೆಗಾರಿಕೆ ಇದೆಯೇ ಎಂಬ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಅವರು ಸಿಎಂ ಆಗಿದ್ದ ಅವಧಿಯಲ್ಲಿ ರಾತ್ರಿ 12 ಗಂಟೆಯ ಸುಮಾರಿಗೆ ನೀರು ಹರಿಸಿದ್ದರು. ಇದೀಗ ಎದೆಗಾರಿಕೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಮಾತ್ರ ಎದೆಗಾರಿಕೆ ಇರುವುದು. ಬೇರೆ ಯಾರಿಗೂ ಕರ್ನಾಟಕದಲ್ಲಿ ಎದೆಗಾರಿಕೆಯೇ ಇಲ್ಲ ಎಂದು ಹರಿಹಾಯ್ದರು.

ಮತ್ತೆ ಕಾವೇರಿ ನೀರು ಬಿಡುಗಡೆ ಆದೇಶ ವಿಚಾರವಾಗಿ ಪ್ರತಿಕ್ರಿಯಿಸಿ, ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ನೀರು ಬಿಡಲು ಹೇಳಿದೆ. 4 ದಿನಗಳಿಂದ ಮಳೆ ಆಗ್ತಿದೆ. ಮಳೆ ನೀರು 7-8 ಸಾವಿರ ಕ್ಯುಸೆಕ್ ಹೋಗ್ತಿದೆ. ಸದ್ಯಕ್ಕೆ ತೊಂದರೆ ಇಲ್ಲ. ದಸರಾ ಸಂದರ್ಭದಲ್ಲಿ ಒಳ್ಳೆ‌‌ಯ ಮಳೆ ಆಗುತ್ತೆ. ಸದ್ಯ ನೀರು ಬಿಡೋಕೆ ನಮಗೆ ಸಮಸ್ಯೆ ಇಲ್ಲ. ಪ್ರಾಧಿಕಾರ 3 ಸಾವಿರ ಕ್ಯುಸೆಕ್ ಬಿಡುವಂತೆ ಹೇಳಿದೆ. ಮಳೆಯಿಂದ 7-8 ಕ್ಯುಸೆಕ್ ಹೋಗ್ತಿದ್ದರೆ ನಮಗೂ ಅನುಕೂಲ ಆಗುತ್ತದೆ. ದೇವರ ದಯೆಯಿಂದ ಮಳೆ ಆಗ್ತಿದೆ‌. ಅಕ್ಟೋಬರ್‌ನಲ್ಲಿ ತಮಿಳುನಾಡಿ‌ನಲ್ಲಿ ಮಳೆ ಆಗುವ ಸೂಚನೆ ಇದೆ. ನಮಗೆ ಮಳೆ ಕೃಪೆ ತೋರಬಹುದು ಎಂದು ಹೇಳಿದರು.

ಕಳೆದ ಬಾರಿಗಿಂತ ಆತ್ಮಹತ್ಯೆ ಕಡಿಮೆ:ಕಾಂಗ್ರೆಸ್​ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಿ.ಸಿ.ಪಾಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಳೆದ ವರ್ಷ ಇದೇ ಸಮಯಕ್ಕೆ 113 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವರ್ಷ 22 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಬಾರಿಗೆ ಹೋಲಿಸಿದ್ರೆ ಆತ್ಮಹತ್ಯೆ ಪ್ರಮಾಣ ಕಡಿಮೆ ಆಗಿದೆ‌. ಪೂರ್ಣ ಪ್ರಮಾಣವಾಗಿ ಆತ್ಮಹತ್ಯೆ ನಿಲ್ಲಿಸಲು ಸರ್ಕಾರ ಕೆಲಸ ಮಾಡ್ತಿದೆ. ಬರ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಅವರು ಎಷ್ಟು ಪರಿಹಾರ ಕೊಡ್ತಾರೆ ನೋಡೋಣ ಎಂದರು.

40 ಲಕ್ಷ ಹೆಕ್ಟೇರ್ ಬೆಳೆ ನಾಶ:ರಾಜ್ಯದಲ್ಲಿ ಒಟ್ಟು ಬಿತ್ತನೆ ಪ್ರದೇಶ 118 ಲಕ್ಷ ಹೆಕ್ಟೇರ್ ಆಗಿದ್ದು, ಶೇ.89 ರಷ್ಟು ಬಿತ್ತನೆಯಾಗಿದೆ. ರಾಜ್ಯದಲ್ಲಿ ಹಾನಿಯಾದ ಒಟ್ಟು ಕೃಷಿ ಪ್ರದೇಶ 39.74 ಲಕ್ಷ ಹೆಕ್ಟೇರ್ ಇದ್ದು, ತೋಟಗಾರಿಕೆ ಬೆಳೆ 1.82 ಲಕ್ಷ ಹೆಕ್ಟೇರ್ ಆಗಿದೆ. ಕೃಷಿ ಹಾಗೂ ತೋಟಗಾರಿಕೆ ಸೇರಿ ಒಟ್ಟು 41.52 ಲಕ್ಷ ಹೆಕ್ಟೇರ್ ಅಂದಾಜು ಬೆಳೆ ಹಾನಿ (ಕೃಷಿ ಮತ್ತು ತೋಟಗಾರಿಕೆ) ಆಗಿದೆ. 30.43 ಸಾವಿರ ಕೋಟಿ ರೂ. ಮೌಲ್ಯದ ನಷ್ಟವಾಗಿದೆ‌‌. 2023ರ ಮುಂಗಾರು ಆಹಾರ ಧಾನ್ಯಗಳ ಉತ್ಪಾದನೆ ಗುರಿ 111 ಲಕ್ಷ ಟನ್ ಇದೆ‌. ಬರಗಾಲದಿಂದ ಅಂದಾಜಿಸಲಾದ ಉತ್ಪಾದನಾ ಹಾನಿ 58 ಲಕ್ಷ ಮೆಟ್ರಿಕ್ ಟನ್. ಬರ ಹಿನ್ನೆಲೆಯಲ್ಲಿ ಕೇಂದ್ರ ತಂಡ 13 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ ಸಂಧರ್ಭ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಸರ್ಕಾರ 100 ದಿನಗಳ ಪೂರೈಕೆ ಇಲಾಖೆಯ ಸಾಧನೆ ಪುಸ್ತಕ ಬಿಡುಗಡೆ ಮಾಡಲಾಗಿದೆ. ನನ್ನ ಇಲಾಖೆಯ ಪುಸ್ತಕ ಬಿಡುಗಡೆ ಮಾಡಿದ್ದೇವೆ. ಸೀಡ್ಸ್ ಕಾರ್ಪೋರೇಷನ್ 34 ಜನರ ನೇಮಕಾತಿ ಕೆಲಸ ಆಗ್ತಿದೆ. ಸಹಾಯಕ ಮ್ಯಾನೇಜರ್, ಜ್ಯೂನಿಯರ್ ಸಹಾಯಕ ಮ್ಯಾನೇಜರ್ ನೇಮಕಾತಿ ಆದೇಶ ನೀಡ್ತಾ ಇದ್ದೇವೆ. ನಕಲಿ ಬಿತ್ತನೆ ಬೀಜ, ಕೀಟನಾಶಕಗಳ ನಿಯಂತ್ರಣ ಮಾಡಿದ್ದೇವೆ. ಮಳೆ ಕೊರತೆಯಿಂದ ಬರಗಾಲ ಬಂದಿದ್ದರು ಶೇ 91 ಬಿತ್ತನೆ ಆಗಿದೆ ಎಂದರು.

ಅಕ್ರಮವಾಗಿ ದಾಸ್ತಾನು ಮಾಡಿದ ನಿಷೇಧಿತ ರಸಗೊಬ್ಬರ ಜಪ್ತಿ ಮಾಡಲಾಗಿದೆ. ಸಬ್ಸಿಡಿ ಬೀಜ ಅಕ್ರಮ ಸಾಗಾಣಿಕೆ ಮಾಡುತ್ತಿದ್ದ 24 ಟನ್ ಯೂರಿಯಾ ಜಪ್ತಿ ಮಾಡಲಾಗಿದೆ. ಈಗಾಗಲೇ 11 ಲಕ್ಷ ದಂಡ ಹಾಕಲಾಗಿದೆ. 15 ಪರವಾನಗಿ ರದ್ದು ಮಾಡಲಾಗಿದೆ. 148 ಕೇಸ್ ದಾಖಲಾಗಿವೆ. 5 ಕೋಟಿ ಮೌಲ್ಯದ ನಕಲಿ ರಸಗೊಬ್ಬರ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ನೆಟ್ಟೆ ರೋಗಕ್ಕೆ 146 ಕೋಟಿ ಪರಿಹಾರವನ್ನು ನೀಡಲಾಗಿದೆ. ಉಳಿದ 84 ಕೋಟಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಹೊಸ ಬರಗಾಲ ಘೋಷಣೆ ಮಾಡಿರುವ 21 ತಾಲ್ಲೂಕುಗಳ ಬರ ಪರಿಸ್ಥಿತಿ ಗ್ರೌಂಡ್ ಟು ಥಿಂಗ್ ವರದಿ ಪಡೆಯಲಾಗಿದೆ. 4,860 ಕೋಟಿ ಪರಿಹಾರ ಕೇಳಿದ್ದೇವೆ. ಹೆಚ್ಚುವರಿ ಪ್ರಸ್ತಾವನೆ ಸಲ್ಲಿಸುತ್ತೇವೆ. ಎರಡು, ಮೂರು ದಿನದಲ್ಲಿ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿಲಾಗುವುದು‌. ಒಟ್ಟು 35 ಜನಕ್ಕೆ ಬೀಜ ನಿಗಮದಿಂದ ಬಡ್ತಿ ನೀಡಲಾಗಿದೆ. 360 ಸಹಾಯಕ ಕೃಷಿ ಅಧಿಕಾರಿಗಳ ನೇಮಕಕ್ಕೆ ಒತ್ತು ನೀಡಲಾಗಿದೆ. ಒಟ್ಟು 57% ಸಿಬ್ಬಂದಿ ಕೊರತೆ ಇದೆ. ಕನಿಷ್ಠ 1000 ಎಒ ಮತ್ತು ಎಎಒ ನೇಮಕಕ್ಕೆ ಒತ್ತು ನೀಡಲಾಗುವುದು. ಸಿಎಂ ಸಹ ನೇಮಕಾತಿಗೆ ಒಪ್ಪಿಗೆ ನೀಡಿದ್ದಾರೆ ಎಂದರು.

ಇದನ್ನೂ ಓದಿ:ಕಾವೇರಿ ಜಲ ವಿವಾದ; ಸಿಡಬ್ಲ್ಯುಆರ್‌ಸಿ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ ಎಂದ ಡಿಸಿಎಂ ಡಿಕೆಶಿ

ABOUT THE AUTHOR

...view details