ಕರ್ನಾಟಕ

karnataka

ETV Bharat / state

ಕೃಷಿ ಇಲಾಖೆಯಲ್ಲಿ ಖಾಲಿ 2 ಸಾವಿರ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ - ರೈತರಿಗೆ ಕೃಷಿ ಇಲಾಖೆಯ ಸಹಕಾರ

ರಾಜ್ಯ ಬೀಜ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಗೊಂಡವರಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ನೇಮಕಾತಿ ಪತ್ರ ನೀಡಿದರು.

ಕೃಷಿ ಸಚಿವ ಎನ್ ಚಲುವರಾಯಸ್ವಾಮಿ
ಕೃಷಿ ಸಚಿವ ಎನ್ ಚಲುವರಾಯಸ್ವಾಮಿ

By ETV Bharat Karnataka Team

Published : Oct 12, 2023, 10:18 PM IST

ಬೆಂಗಳೂರು : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಸುಮಾರು ಎರಡು ಸಾವಿರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೊದಲ ಹಂತಗಳಲ್ಲಿ ಕನಿಷ್ಠ 1000 ಹುದ್ದೆ ಭರ್ತಿ ಮಾಡಲಾಗುವುದು ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಗುರುವಾರ ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ವಿವಿಧ ಹುದ್ದೆಗೆ ನೇಮಕಗೊಂಡವರಿಗೆ ನೇಮಕಾತಿ ಪತ್ರ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ ನೇಮಕಾತಿ ನಡೆಯಲಿಲ್ಲ. ರಾಜ್ಯದಲ್ಲಿ ಹೊಸ ಸರ್ಕಾರ ಬಂದ ನಾಲ್ಕೇ ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು.

ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ 32 ಅಭ್ಯರ್ಥಿಗಳು ನೇಮಕಗೊಂಡಿದ್ದು, ಎಲ್ಲರಿಗೂ ನೇಮಕಾತಿ ಆದೇಶವನ್ನು ನೀಡಲಾಗುತ್ತಿದೆ ಎಂದ ಅವರು, ಕೃಷಿ ಇಲಾಖೆಯ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳ ನೇಮಕಾತಿಗೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.

ಇದಕ್ಕೂ ಮುನ್ನ ಸಚಿವ ಚಲುವರಾಯಸ್ವಾಮಿ ಅವರು ರಾಜ್ಯ ಬೀಜ ನಿಗಮ ಹಾಗೂ ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣದ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಬೀಜ ನಿಗಮದ ಉದ್ದೇಶಗಳು, ಹಾಗೂ ಉತ್ತಮ ಗುಣಮಟ್ಟದ ಬೀಜಗಳನ್ನು ರೈತರಿಗೆ ಸರಿಯಾದ ವೇಳೆಗೆ, ಸರಿಯಾದ ಸ್ಥಳದಲ್ಲಿ ಯೋಗ್ಯದರದಲ್ಲಿ ಒದಗಿಸಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣದ ಸಂಸ್ಥೆಯ ಪ್ರಗತಿ ಪರಿಶೀಲನೆ ಹಾಗೂ ಹಿಂದಿನ ಸಾಲಿನ ಕಾರ್ಯಕ್ರಮಗಳ ಬಗ್ಗೆ ಸಚಿವರು ಸಭೆ ನಡೆಸಿದರು. ಬೀಜೋತ್ಪಾದಕರ ಸಂಘವಾರು ನೋಂದಾಯಿತ ಕ್ಷೇತ್ರ ಮತ್ತು ಪ್ರಮಾಣಿಕರಿಸಿದ ದಾಸ್ತಾನು ವಿವರ, ಸಂಸ್ಥೆಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ, ಪ್ರಗತಿ ಬಗ್ಗೆ ಚರ್ಚಿಸಿದ ಸಚಿವರು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಶೀಘ್ರವಾಗಿ ನಿರ್ಮಾಣ ಮಾಡಿ ಮುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಕೃಷಿ‌ ಆಯುಕ್ತ, ವೈ.ಎಸ್.ಪಾಟೀಲ್, ಕಾರ್ಯದರ್ಶಿ ಅನ್ಬುಕುಮಾರ್, ಕೃಷಿ ನಿರ್ದೇಶಕ ಡಾ.ಜಿ.ಟಿ ಪುತ್ರ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ನೇಮಕಾತಿ ಪತ್ರ ವಿತರಣೆ : ಇದೇ ಸಂದರ್ಭದಲ್ಲಿ ನಿಗಮದ ಪ್ರಧಾನ ಕಚೇರಿ ಬೀಜ ಭವನದಲ್ಲಿ ನಿಗಮದ ವ್ಯವಸ್ಥಾಪಕ ನಿದೇ೯ಶಕ ಹೆಚ್.ಎಸ್.ದೇವರಾಜ್‌, ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ವಿತರಣೆ ಮಾಡಿ, ನಿಗಮದ ಕಾಯ೯ ಚಟುವಟಿಕೆಗಳ ಕುರಿತು ವಿವರ ನೀಡಿದರು.

ನಿಗಮವು ತನ್ನದೇ ಆದ ಸ್ವಂತ ಬೀಜ ಸಂಸ್ಕರಣಾ ಘಟಕಗಳನ್ನು ಹೊಂದಿದ್ದು, ಕಳೆದ ನಾಲ್ಕು ದಶಕಗಳಿಂದ ರೈತರುಗಳಿಗೆ ಉತ್ತಮ ಗುಣ ಮಟ್ಟದ ಬೀಜಗಳನ್ನು ನಿಗದಿತ ಸಮಯಕ್ಕೆ ರಾಜ್ಯಾದ್ಯಂತ ಎಲ್ಲಾ ರೈತರಿಗೆ ಕೃಷಿ ಇಲಾಖೆಯ ಸಹಕಾರದೊಂದಿಗೆ ಬೀಜ ವಿತರಣೆ ಮಾಡುತ್ತಿರುವ ಸಂಸ್ಥೆಗೆ ಆಯ್ಕೆಯಾಗಿರುವುದಕ್ಕೆ ಅಭ್ಯರ್ಥಿಗಳನ್ನು ಅಭಿನಂದಿಸಿದರು. ನಿಷ್ಠೆ, ಪ್ರಾಮಾಣಿಕತೆಯಿಂದ ಈ ರೈತ ಸಂಸ್ಥೆಗೆ ದುಡಿಯುವಂತೆ ಅಭ್ಯಥಿ೯ಗಳಿಗೆ ಕಿವಿ ಮಾತು ಹೇಳಿದರು.

ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಡಿ.ಎಲ್.ನಾಗರಾಜ, ಶಿವಬಸಪ್ಪ ಬೆಲ್ಲದ್‌, ಎನ್.ಎಸ್.ಹಾವೇರಿ ಮತ್ತು ಪ್ರಧಾನ ವ್ಯವಸ್ಥಾಪಕರುಗಳಾದ ಡಾ.ಎಂ.ಎ.ಗಿರೀಶ್, ರಾಮಕೃಷ್ಣ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಸಣ್ಣ ನೀರಾವರಿ ಯೋಜನೆಗಳ ಪ್ರಾರಂಭವಾಗದ, ಹೊಸ ಕಾಮಗಾರಿಗಳ ಬಿಲ್ ಬಗ್ಗೆ ಪರಿಶೀಲಿಸಿ ಕ್ರಮ: ಸಿಎಂ

ABOUT THE AUTHOR

...view details