ಬೆಂಗಳೂರು:ರಾಜ್ಯದಲ್ಲಿ ಕೃಷಿ ಕ್ಷೇತ್ರದ ಸುಧಾರಣೆ ಕುರಿತಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಎಫ್ಕೆಸಿಸಿಐ ಪದಾಧಿಕಾರಿಗಳು ಹಾಗು ಕೈಗಾರಿಕೋದ್ಯಮಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ವಿಕಾಸಸೌಧದ ಕಚೇರಿಯಲ್ಲಿ ಸೋಮವಾರ ಸಂಜೆ ತಮ್ಮನ್ನು ಭೇಟಿಯಾದ ಎಫ್ಕೆಸಿಸಿಐ ಪದಾಧಿಕಾರಿಗಳು ಹಾಗು ಕೈಗಾರಿಕೋದ್ಯಮಿಗಳೊಂದಿಗೆ 'ನಮ್ಮ ರಾಜ್ಯ ನಮ್ಮ ಕೃಷಿ' ಸಮ್ಮೇಳನ ಆಯೋಜನೆ, ಕೃಷಿ ಉತ್ಪಾದನೆ ಮತ್ತು ಮಾರುಕಟ್ಟೆ ವ್ಯವಸ್ಥೆ, ಮೌಲ್ಯವರ್ಧನೆ, ಕೃಷಿ ಯಾಂತ್ರೀಕರಣಗಳ ಕುರಿತು ಸಚಿವರು ವಿಸೃತ ಚರ್ಚೆ ನಡೆಸಿದರು.
ರಾಜ್ಯದಲ್ಲಿ ಯಾಂತ್ರೀಕರಣ ಯೋಜನೆಯನ್ನು ಒಳಪಡಿಸುವಾಗ ಕರ್ನಾಟಕದಲ್ಲಿಯೇ ಯಂತ್ರಗಳನ್ನು ತಯಾರಿಸುವ ಉದ್ದಿಮೆದಾರರಿಗೆ ಆದ್ಯತೆ ನೀಡುವುದು. ಆಂಧ್ರಪ್ರದೇಶದ ಮಾದರಿಯಂತೆ ರಾಜ್ಯದಲ್ಲಿ ಗುಣಮಟ್ಟದ ಬೀಜಗಳನ್ನು ಉತ್ಪಾದಿಸಲು ಹಾಗು ಉತ್ಪಾದನೆ ಹೆಚ್ಚಿಸಲು ವಿದೇಶಗಳಿಂದ ಬೀಜಗಳನ್ನು ಆಮದು ಮಾಡಿಕೊಳ್ಳಲು ಪ್ರಸ್ತುತವಿರುವ ಮಾರ್ಗಸೂಚಿಗಳನ್ನು ಸುಲಭಗೊಳಿಸುವ ಕುರಿತು ಮಾತನಾಡಿದರು.
ಉದ್ದಿಮೆದಾರರು ರಾಜ್ಯದಲ್ಲಿ ಉದ್ದಿಮೆ ಪ್ರಾರಂಭಿಸಲು ಶೇ 70ರಷ್ಟು ಹಣ, ಭೂಮಿ ಖರೀದಿಸಲು ವೆಚ್ಚವಾಗುವುದರಿಂದ ವಿಶೇಷವಾಗಿ ರಾಜ್ಯ ಸರ್ಕಾರವು ಬೀಜ ಸಂಶೋಧನೆ, ಬೀಜ ಸಂಸ್ಕರಣೆ ಕೃಷಿ ಉಪಕರಣಗಳ ತಯಾರಿಕೆಗೆ ಆದ್ಯತೆಯ ಮೇಲೆ ಕಡಿಮೆ ದರದಲ್ಲಿ ಭೂಮಿ ಒದಗಿಸುವ ನೀತಿಯಲ್ಲಿ ತೆರವು ಕುರಿತು ಸಮಾಲೋಚನೆ ನಡೆಸಲಾಯಿತು.
ರಾಜ್ಯದಲ್ಲಿ ಈಗಾಗಲೇ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಒದಗಿಸಿರುವ 150 ಕಬ್ಬು ಕತ್ತರಿಸುವ ಯಂತ್ರಗಳನ್ನು ಒದಗಿಸಿದ್ದು ಬಹುತೇಕ ರೈತರು ಇಲ್ಲಿಯವರೆಗೆ ನೋಂದಣಿ ಶುಲ್ಕ ದುಬಾರಿಯಾಗಿರುವುದರಿಂದ ಹಾಗು ಈ ವರ್ಷದ ಆಯವ್ಯಯದಲ್ಲಿ ಹಾರ್ವೆಸ್ಟರ್ ಹಬ್ ಮಾಡುವಾಗ ಕಬ್ಬು ಕಟಾವು ಯಂತ್ರಗಳ ನೋಂದಣಿ ಶುಲ್ಕವನ್ನು ಆಂಧ್ರ ಹಾಗು ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ಕಡಿತಗೊಳಿಸುವುದರ ಬಗ್ಗೆಯೂ ಚರ್ಚಿಸಲಾಯಿತು.