ಬೆಂಗಳೂರು:ಬಿಟ್ ಕಾಯಿನ್ (bitcoin)ವಿಚಾರದಲ್ಲಿ ವಿವಾದ ಸೃಷ್ಟಿಸಿ ಅದರಿಂದ ರಾಜಕೀಯ ದುರ್ಲಾಭ ಪಡೆದುಕೊಳ್ಳಬಹುದು ಎಂಬ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ಮುಖಂಡರಿಗೆ, ಇದೇ ಬಿಟ್ ಕಾಯಿನ್ ತಿರುಗುಬಾಣವಾಗಿ ಮುಳುವಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಸಾಬೀತಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್(Minister C C Patil) ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಜನಪರವಾದ ಆಡಳಿತವನ್ನು ನೀಡುತ್ತಾ ಈಗಾಗಲೇ ಯಶಸ್ವಿಯಾಗಿ ಶತದಿನಗಳನ್ನು ಪೂರೈಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತದ ಕಾರ್ಯಸಾಧನೆಯನ್ನು ಕಂಡು ಹತಾಶರಾಗಿ ಕಾಂಗ್ರೆಸ್ ನಾಯಕರು ಬಿಟ್ ಕಾಯಿನ್ ಹೆಸರಿನಲ್ಲಿ ವಿನಾಕಾರಣ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸಲು ಹವಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ನಾಯಕರೇ ತಮಗೆ ಬಿಟ್ ಕಾಯಿನ್ ಹಗರಣದ ಮಾಹಿತಿ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ಸಿನ ಮುಖಂಡರೊಬ್ಬರು ಹೇಳುವ ಮೂಲಕ ಈ ತನಿಖೆಯ ಹಾದಿ ತಪ್ಪಿಸಲು ಮತ್ತು ಬಿಜೆಪಿಯಲ್ಲಿ ಹುಳಿ ಹಿಂಡಿ ಒಡಕು ಸೃಷ್ಟಿಸಲು ಹವಣಿಸಿರುವುದು ಸ್ಪಷ್ಟವಾಗಿದೆ. ಆದರೆ ಇಂತಹ ಹುನ್ನಾರಗಳ ಆಟ ನಡೆಯುವುದಿಲ್ಲ. ಬಿಜೆಪಿಯಲ್ಲಿ ಆಂತರಿಕ ಒಗ್ಗಟ್ಟು ಗಟ್ಟಿಯಾಗಿದೆ. ಕಾಂಗ್ರೆಸ್ಸಿನ ಹಾಗೆ ''ಒಂದು ಮನೆ ಹಲವು ಬಾಗಿಲು" ಎಂಬಂಥ ಪರಿಸ್ಥಿತಿ ನಮ್ಮಲ್ಲಿಲ್ಲ ಎಂದು ಸಿ.ಸಿ. ಪಾಟೀಲರು ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ್ದಾರೆ.