ಕೆಆರ್ಪುರ:ಬಿಜೆಪಿ ಸರ್ಕಾರ ಸಮಾಜದ ಪ್ರತಿಯೊಂದು ವರ್ಗದ ಜನರಿಗೂ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದರು.
ಕ್ಷೇತ್ರದ ಬಿ.ನಾರಾಯಣಪುರದ ಕಲ್ಯಾಣ ಮಂಟಪದಲ್ಲಿ ಪೂರ್ವ ತಾಲೂಕು ಶ್ರೀ ಭುವನೇಶ್ವರಿ ಒಕ್ಕಲಿಗರ ಸಂಘದ ವತಿಯಿಂದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಸಚಿವರಾದ ಮೇಲೆ ಇದೇ ಮೊದಲ ಬಾರಿಗೆ ಒಕ್ಕಲಿಗ ಸಮುದಾಯ ಮುಖಂಡರು ಸೇರಿ ಸಚಿವರಿಗೆ ಬೆಳ್ಳಿ ಕಿರೀಟ ಮತ್ತು ಬೆಳ್ಳಿ ಖಡ್ಗ ನೀಡಿ ಅದ್ದೂರಿಯಾಗಿ ಸನ್ಮಾನಿಸಿದರು.
ಓದಿ: ಪಕ್ಷ ಸಂಘಟನೆಗೆ ಪಣ: ಭಾನುವಾರವೂ ಚಟುವಟಿಕೆ ಕೇಂದ್ರವಾದ ಡಿಕೆಶಿ ನಿವಾಸ
ಕೇವಲ ಅಧಿಕಾರಕ್ಕಾಗಿ ನಾನು ಪಕ್ಷ ತೊರೆಯಲಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿದೆ ತಾರತಮ್ಯ ಮಾಡಲಾಗುತ್ತಿತ್ತು. ಅಭಿವೃದ್ಧಿ ಕಾರ್ಯಗಳು ನಡೆಯದೆ ಜನರಿಗೆ ಉತ್ತರಿಸಲು ಸಾಧ್ಯವಾಗಿರಲಿಲ್ಲ. ಕ್ಷೇತ್ರದ ಜನರ ಹಿತ ಮುಖ್ಯವೇ ಹೊರತು ಅಧಿಕಾರದ ಆಸೆ ಇರಲಿಲ್ಲ, ನನ್ನ ಸ್ವಾಭಿಮಾನಕ್ಕೆ ಧಕ್ಕೆ ಯಾಗಿದ್ದಕ್ಕೆ ರಾಜೀನಾಮೆ ನೀಡಿದೆ ಎಂದು ಅವರು ಹೇಳಿದರು.
ಈಗ ಬಿಜೆಪಿ ಸರ್ಕಾರ ಸಚಿವ ಸ್ಥಾನ ನೀಡಿದ್ದು ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುತ್ತಿದ್ದೇನೆ. ಅಲ್ಲದೇ ಬಿಜೆಪಿ ಪಕ್ಷ ನನಗೆ ಎಲ್ಲಾ ಗೌರವವನ್ನು ನೀಡಿದೆ. ಅದನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು.