ಬೆಂಗಳೂರು: ಜನರಿಗೆ ಹಂಚಿಕೆಯಾಗದೆ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಉಳಿದುಕೊಂಡಿದ್ದ 5,000 ಕೋಟಿ ರೂ ಮೌಲ್ಯದ ಬಹು ದೊಡ್ಡ ಆಸ್ತಿಯನ್ನು ಸರ್ಕಾರ ಪತ್ತೆ ಹಚ್ಚಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಜನರಿಗೆ ಹಂಚಿಕೆಯಾಗದೆ ಉಳಿದ 13 ಸಾವಿರ ನಿವೇಶನಗಳು ಮತ್ತು 200 ಎಕರೆಗೂ ಹೆಚ್ಚಿನ ಭೂಮಿಯನ್ನು ಪತ್ತೆ ಹಚ್ಚಲಾಗಿದ್ದು, ಉಳಿದ ಅಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಹಂಚಿಕೆಯಾಗದೆ ಉಳಿದಿರುವ ಆಸ್ತಿಯ ವಿವರ ಪಡೆಯುವುದಾಗಿ ಹೇಳಿದರು.
ಮೈಸೂರು ಮಹಾನಗರದ ವ್ಯಾಪ್ತಿಯಲ್ಲಿ ಮೂಡಾ ಹಲವಾರು ಬಡಾವಣೆಗಳನ್ನು ನಿರ್ಮಿಸಿದ್ದು, ಹಲವು ಕಾರಣಗಳಿಂದ ತನ್ನ ವಶದಲ್ಲಿರುವ ನಿವೇಶನಗಳ ವಿವರ ಮರೆತಿತ್ತು. ಆದರೆ, ಈಗ ಅಂತಹ ನಿವೇಶನ ಮತ್ತು ಭೂಮಿಯ ವಿವರವನ್ನು ತರಿಸಿಕೊಂಡಿದ್ದು ಇವತ್ತಿನ ಮಾರುಕಟ್ಟೆಯಲ್ಲಿ ಅದರ ಮೌಲ್ಯ 5 ಸಾವಿರ ಕೋಟಿ ರೂ. ಗಳಷ್ಟಾಗುತ್ತದೆ. ಇಷ್ಟು ದೊಡ್ಡ ಹಣವನ್ನು ಬಳಸಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದು. ಆದರೆ, ಮೂಡಾದ ವ್ಯಾಪ್ತಿಯಲ್ಲಿ ಸಿಕ್ಕ ಆಸ್ತಿಯನ್ನು ಹಲವು ಕಾರ್ಯಗಳಿಗೆ ಬಳಸಲು ನಿರ್ಧರಿಸಲಾಗಿದೆ ಎಂದರು.
ಮೈಸೂರಿನಲ್ಲಿ ಬಡವರಿಗಾಗಿ ಗುಂಪು ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರ ಬಯಸಿದ್ದು, ಇದೇ ರೀತಿ ಹಲವು ನಿವೇಶನಗಳನ್ನು ಮಾರಾಟ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಯೋಚಿಸಲಾಗಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳ ಆರ್ಥಿಕತೆಯನ್ನು ಬಲಪಡಿಸಿ ಜನರಿಗೆ ನಿವೇಶನಗಳನ್ನು ವಿತರಿಸಲು ಯೋಜಿಸಲಾಗಿದ್ದು ಹಾಸನದಲ್ಲಿ 1,200 ಎಕರೆ, ಬಳ್ಳಾರಿಯಲ್ಲಿ 120 ಎಕರೆ, ದಾವಣಗೆರೆಯಲ್ಲಿ 57 ಎಕರೆ ಸೇರಿದಂತೆ ಹಲವು ಕಡೆ ಭೂಮಿ ಖರೀದಿಸಲಾಗಿದೆ ಎಂದು ಹೇಳಿದರು.