ಬೆಂಗಳೂರು: ನಾನು ರೈತರನ್ನು ಹೇಡಿ ಎಂದು ಎಂದಿಗೂ ಸಂಬೋಧಿಸಿಲ್ಲ, ಆತ್ಮಹತ್ಯೆಯಂತಹ ಕೆಲಸ ಹೇಡಿತನದ್ದು ಎಂದಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಕೋಲಾರ ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಹೇಡಿ ಎಂಬ ಪದ ಬಳಕೆ ವಿವಾದ ಹುಟ್ಟು ಹಾಕಿರುವ ಸಂಬಂಧ ಪ್ರತಿಕ್ರಿಯಿಸಿದರು. ರೈತ ಹೇಡಿ ಎಂದು ನಾನು ಹೇಳೇ ಇಲ್ಲ. ಆತ್ಮಹತ್ಯೆ ಮಾಡಿಕೊಳ್ಳುವವ ಹೇಡಿ ಅಂತ ಹೇಳಿದ್ದೇನೆ. ಆತ್ಮಹತ್ಯೆ ಮಾಡಿದರೆ ಅವನ ಹೆಂಡತಿ ಮಕ್ಕಳ ಪರಿಸ್ಥಿತಿ ಏನಾಗಬೇಕು?. ಆತ್ಮಹತ್ಯೆ ಯಾರು ಮಾಡಿಕೊಂಡರೂ ಅವನು ಹೇಡಿ. ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಈಸಬೇಕು ಇದ್ದು ಜಯಿಸಬೇಕು ಎಂದು ಹಿರಿಯರು ಹೇಳಿದ್ದಾರೆ ಎಂದು ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಕೆ.ಆರ್. ಪೇಟೆ ಮಹಿಳೆ ಉದಾಹರಣೆ ಕೊಟ್ಟು ಹೇಳಿದ್ದೇನೆ. ಕೈಗೆ ಚಿನ್ನದ ಬಳೆ ಹೇಗೆ ಬಂತು ಎಂದು ಕೇಳಿದೆ?. ಆಗ ಆ ಮಹಿಳೆ ವಿವರಣೆ ಕೊಟ್ಟಿದನ್ನು ನಾನು ಹೇಳಿದೆ. ರೈತ ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿದ್ದೇನೆ ಅಷ್ಟೇ ಎಂದು ವಿವರಿಸಿದರು.
ನನ್ನ ಭಾಷಣವನ್ನು ಸಂಪೂರ್ಣ ಕೇಳಲಿ, ಸರ್ಕಾರ ರೈತರಿಗೆ ಏನೆಲ್ಲಾ ಕೊಡಬೇಕು ಅದನ್ನು ಕೊಡುತ್ತಿದ್ದೇವೆ. ಕೆರೆಗೆ ನೀರು ತುಂಬಿಸುವುದು, ಗೊಬ್ಬರ ವಿತರಣೆ ಹೀಗೆ ಸರ್ಕಾರದ ಪ್ರಾಯೋಗಿಕ ಕೆಲಸ ಮಾಡುತ್ತಿದ್ದೇವೆ. ರೈತನೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮ ಮಾಡುತ್ತಿದ್ದೇವೆ. ರೈತ ಆತ್ಮಹತ್ಯೆ ಮಾಡಿಕೊಂಡ ನಂತರ ಅವರಿಗೆ ಸಾಂತ್ವನ ಹೇಳಿ, ರೈತನ ಶವಕ್ಕೆ ಹಾರ ಹಾಕುವುದಲ್ಲ. ನಾನು ರೈತ, ರೈತನ ಮಗ, ನನಗೂ ರೈತರ ಬಗ್ಗೆ ಕಾಳಜಿ ಇದೆ. ಕಷ್ಟವನ್ನು ಹಿಮ್ಮೆಟ್ಟಿಸಬೇಕು, ಬೀಸೊ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎಂದರು.
ಓದಿ:ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಹಾಗೆ ಮಾಡುವವರು ಹೇಡಿಗಳು: ಬಿ.ಸಿ.ಪಾಟೀಲ್