ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್ ನಾಯಕರಿಗೆ ಕಾಮಾಲೆ ಕಣ್ಣು. ಎಲ್ಲವನ್ನೂ ಹಳದಿ ಎಂದೇ ಭಾವಿಸಿ ಹಾಗೆಯೇ ಬಿಂಬಿಸುತ್ತಾರೆ. ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳು, ಸಾಧನೆಗಳು ಅವರ ಕಣ್ಣಿಗೆ ಕಾಣುವುದಿಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್ಗೆ ಡೈವೋರ್ಸ್ ನೀಡಿ ಹೊರಬಂದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಟೀಕಿಸಿದರು.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳು ಮಾತ್ರವಲ್ಲ, ಅದರ ಹೊರತಾಗಿಯೂ ಅಮೃತ ಯೋಜನೆಗಳು, ಸಿಎಂ ರೈತ ನಿಧಿ, ಎಸ್ಸಿ ಎಸ್ಟಿ ಮೀಸಲು ಹೆಚ್ಚಳ ಸೇರಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ರಾಜ್ಯ ಸರ್ಕಾರದ ಸಾಧನೆಗೆ ಹಲವು ಪ್ರಶಸ್ತಿಗಳು ಕೇಂದ್ರ ಸರ್ಕಾರ ಹಾಗೂ ಹಲವು ಸಂಸ್ಥೆಗಳಿಂದ ಸಂದಿವೆ. ಕಾಂಗ್ರೆಸ್‌ನವರ ಸೇ ಸಿಎಂ ಅಭಿಯಾನಕ್ಕೆ ದಾಖಲೆ ಸಹಿತ ಉತ್ತರಿಸುತ್ತೇವೆ. ಅಭಿವೃದ್ಧಿ ಕೆಲಸ ಸಹಿಸದೇ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಭಕ್ತಾದಿಗಳ ಜೊತೆ ಚರ್ಚೆ ಒಳ್ಳೆಯದು: ಚಿತ್ರದುರ್ಗ ಜಿಲ್ಲೆಯ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದು ಮಠ, ಭಕ್ತಾದಿಗಳು ಹಾಗೂ ಸ್ವಾಮೀಜಿಗಳಿಗೆ ಸಂಬಂಧಿಸಿದ ವಿಚಾರ. ಈಗಾಗಲೇ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡುವ ವಿಚಾರಕ್ಕೂ ಮುನ್ನ ಮಠದ ಭಕ್ತಾದಿಗಳ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು ಎಂದರು.
ಸಿರಿಧಾನ್ಯ ಮೇಳ ಆಯೋಜನೆ: ರೈತರ ಸಿರಿಧಾನ್ಯ ಬೆಳೆಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಿ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಬರುವ ಜನವರಿ 20 ರಿಂದ 22ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ಆಯೋಜಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.