ಬೆಂಗಳೂರು:ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಸಂಬೋಧಿಸಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಇದೇ ವೇಳೆ ಆ ರೀತಿ ಸಂಬೋಧಿಸಿಲ್ಲ ಎಂದು ಸಚಿವರು ಸ್ಪಷ್ಟೀಕರಣ ನೀಡಿದ್ದಾರೆ.
ಕಾಂಗ್ರೆಸ್ ಟ್ವೀಟ್:
ಕೃಷಿ ಸಚಿವರಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸದ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರೇ, ರೈತರನ್ನು ಹೇಡಿ ಎಂದು ಕರೆಯುವ ನೈತಿಕತೆ ನಿಮಗೇನಿದೆ?, ರೈತರ ಜೀವನ ಹಸನಾಗಿಸುವ ಒಂದೇ ಒಂದು ಯೋಜನೆಯನ್ನೂ ರೂಪಿಸದೆ ಇಂತಹ ಹೇಳಿಕೆ ನೀಡಿದ್ದೀರಿ. ಅದನ್ನು ಸಮರ್ಥಿಸಿ ಅಹಂಕಾರವನ್ನು ತೋರುತ್ತಿದ್ದೀರಿ. ಕೃಷಿ ಸಚಿವ ಸ್ಥಾನಕ್ಕೆ ನೀವು ಅನರ್ಹರು. ಕೂಡಲೇ ರಾಜೀನಾಮೆ ಕೊಡಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಓದಿ:ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಹಾಗೆ ಮಾಡುವವರು ಹೇಡಿಗಳು: ಬಿ.ಸಿ.ಪಾಟೀಲ್
ಪ್ರವಾಹದಿಂದ ನಷ್ಟಕ್ಕೆ ಒಳಗಾದ ರೈತರು, ಸಂಸದರನ್ನು ಪರಿಹಾರ ಕೇಳಿದ್ದಕ್ಕೆ ಪ್ರತಿಯಾಗಿ ಅವರ ಮೇಲೆ ಸುಳ್ಳು ಕೇಸು ದಾಖಲಿಸಿ ವಿಚಾರಣೆ ಹೆಸರಲ್ಲಿ ಕಿರುಕುಳ ನೀಡಲಾಗುತ್ತಿದೆ. ಕೃಷಿ ಸಚಿವರೇ ಈಗ ಹೇಳಿ ಹೇಡಿಗಳು ರೈತರೋ? ಅಥವಾ ನಿಮ್ಮ ಸಂಸದ ಹಾಗು ಸರ್ಕಾರವೋ? ಎಂದು ಪ್ರಶ್ನಿಸಿದೆ. ಯಾರು ಹೇಡಿಗಳು ಉತ್ತರಿಸಿ ಸಚಿವರೇ, ನೆರೆಯಿಂದ ಬೆಳೆ ನೀರು ಪಾಲಾದಾಗ, ಲಾಕ್ಡೌನ್ನಿಂದ ಜಮೀನಿನಲ್ಲೇ ಬೆಳೆ ಕೊಳೆತಾಗ, ಬೆಲೆ ಇಲ್ಲದಾದಾಗ, ಸಾಲಗಾರರು ಮನೆ ಬಾಗಿಲಿಗೆ ಬಂದಾಗ ನೀವೆಲ್ಲಿದ್ದೀರಿ? ರೈತರ ಮೇಲೆ ಗುಂಡು ಹಾರಿಸಿ, ಲಾಠಿ ಚಾರ್ಜ್ ಮಾಡಿ, ಕರಾಳ ಕಾಯ್ದೆಗಳ ಮೂಲಕ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಸಿರುವ ಬಿಜೆಪಿಗರು ದೊಡ್ಡ ಶೂರರೇ? ಎಂದು ವಾಗ್ದಾಳಿ ನಡೆಸಿದೆ.
ಬಿ.ಸಿ.ಪಾಟೀಲ್ ಪ್ರತಿಕ್ರಿಯೆ:
ನಾನು ರೈತರನ್ನು ಹೇಡಿ ಎಂದು ಎಂದಿಗೂ ಸಂಬೋಧಿಸಿಲ್ಲ. ಆತ್ಮಹತ್ಯೆಯಂತಹ ಕೆಲಸ ಹೇಡಿತನದ್ದು ಎಂದಿದ್ದೇನೆ. ಯಾರೇ ಆಗಲೀ ಆತ್ಮಹತ್ಯೆಯಂತಹ ಹೇಡಿತನದ ಕೆಲಸಕ್ಕೆ ಮುಂದಾಗಬಾರದು. ಕಷ್ಟನಷ್ಟಗಳನ್ನು ಈಜಿ ಜಯಿಸಬೇಕು. ಕಷ್ಟಗಳು ಇಂದಿದ್ದಂತೆ ನಾಳೆ ಇರುವುದಿಲ್ಲ. ಕತ್ತಲಾದ ಮೇಲೆ ಬೆಳಕು ಬಂದೇ ಬರುತ್ತದೆ. ಕೋಲಾರ ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಸಮಗ್ರ ಕೃಷಿನೀತಿಯನ್ನು ಅಳವಡಿಸಿಕೊಂಡು ಮಾದರಿಯಾಗಿದ್ದಾರೆ. ರೈತರ ಆತ್ಮಹತ್ಯೆ ಪ್ರಯತ್ನಗಳನ್ನು ತಡೆಯುವ ನಿಟ್ಟಿನಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಸಮಗ್ರ ಕೃಷಿ ನೀತಿಯನ್ನು ರೈತರು ಹೆಚ್ಚೆಚ್ಚು ಅಳವಡಿಸಿಕೊಳ್ಳಬೇಕು ಎಂದು ಬಿಸಿಪಿ ಹೇಳಿದ್ದಾರೆ.