ಬೆಂಗಳೂರು :ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ ಬಳಕೆ ಸೇರಿದಂತೆ ಕೀಟನಾಶಕ, ಲಘು ಪೋಷಕಾಂಶಗಳು ಮತ್ತು ಬೆಳೆ ಪ್ರಚೋದಕಗಳ ಸಿಂಪಡಣೆ, ಬೆಳೆವಾರು ಬಳಕೆ ಕುರಿತು ಸಂಶೋಧನೆಯನ್ನು ನಡೆಸಲು ಅನುಕೂಲವಾಗುವಂತೆ ನೂತನ ಪದ್ಧತಿಗಳನ್ನು ಅಭಿವೃದ್ಧಿಪಡಿಸಿ, ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ವಿಜ್ಞಾನಿಗಳ ತಂಡಗಳನ್ನು ರಚನೆ ಮಾಡಲು ಕೃಷಿ ವಿವಿಗಳು ಯೋಜನಾ ವರದಿ ನೀಡುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದರು.
ವಿಕಾಸಸೌಧಲ್ಲಿ ಇಂದು ಉನ್ನತಾಧಿಕಾರ ಸಮಿತಿಯ ಪರಿಶೀಲನಾ ಸಭೆ ನಡೆಸಿದ ಸಚಿವರು, ವಿಜ್ಞಾನಿಗಳ ತಂಡವನ್ನು ರಚಿಸಲು ಕೃಷಿ ವಿಶ್ವವಿದ್ಯಾಲಯಗಳಿಗೆ ಕೃಷಿ ವಿವಿಗಳಲ್ಲಿ ಅಭಿವೃದ್ಧಿಪಡಿಸಿರುವ ಬೆಳೆಗಳ ತಳಿಗಳನ್ನು ಹಾಗೂ ಉತ್ತಮ ತಾಂತ್ರಿಕತೆಗಳ ಕುರಿತು ವ್ಯಾಪಕ ಪ್ರಚಾರ ನೀಡುವುದು. ಕೃಷಿ ಇಲಾಖೆಯು ಕೃಷಿ ವಿಶ್ವ ವಿದ್ಯಾಲಯಗಳು ಅಭಿವೃದ್ಧಿಪಡಿಸಿರುವ ಉತ್ತಮ ತಳಿಗಳನ್ನು ಸಹಾಯಧನ ಕಾರ್ಯಕ್ರಮದಡಿ ತರಲು ಕ್ರಮವಹಿಸಲು ಸೂಚಿಸಿದರು.
ಸಭೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಸೆಕೆಂಡರಿ ಕೃಷಿಗೆ ಒತ್ತು ನೀಡುವುದರ ಜೊತೆಗೆ ಸೆಕೆಂಡರಿ ಕೃಷಿ ಕುರಿತು ರಾಜ್ಯದ ಎಲ್ಲಾ ಕೃಷಿ ವಿಶ್ವ ವಿದ್ಯಾಲಯಗಳಲ್ಲಿರುವ ನೂತನ ತಾಂತ್ರಿಕತೆಗಳನ್ನು ಒಂದೇ ಸೂರಿನಡಿ ರೈತರಿಗೆ ಲಭ್ಯವಾಗುವಂತೆ ಇನ್ನು ಬೇಷನ್ ಕೇಂದ್ರಗಳ ಮೂಲಕ ರೈತರಿಗೆ ಮಾಹಿತಿ / ತರಬೇತಿ ನೀಡಲು ತಿಳಿಸಲಾಯಿತು. ಎಲ್ಲ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ರೈತಸ್ನೇಹಿ ಆದಾಯ ಹೆಚ್ಚಿಸುವ ಸಂಶೋಧನೆಗಳನ್ನು ತಂತ್ರಾಂಶದಲ್ಲಿ ಅಳವಡಿಸಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಇದೇ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಕೃಷಿ ಪಂಡಿತ ಪ್ರಶಸ್ತಿ ವಿಜೇತ ರೈತರಿಂದ ಸ್ಥಳೀಯವಾಗಿ ಲಭ್ಯವಿರುವ ವಿವಿಧ ಸೆಕಂಡರಿ ಕೃಷಿ ಉದ್ಯಮಗಳ ಕುರಿತು ಮಾಹಿತಿ ಪಡೆಯಲಾಯಿತು. ಸಭೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ,ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿವಿಧ ಕೃಷಿ ತೋಟಗಾರಿಕೆ /ಪಶುಸಂಗೋಪನಾ ವಿಶ್ವವಿದ್ಯಾಲಯಗಳ ಕುಲಪತಿಗಳು, ಆಯುಕ್ತರು, ನಿರ್ದೇಶಕರು ಪಂಡಿತ ಪ್ರಶಸ್ತಿ ವಿಜೇತರು ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ಇಳಿಕೆ: 588 ಜನರಲ್ಲಿ ಸೋಂಕು, 19 ಜನರು ಸಾವು