ಬೆಂಗಳೂರು :ಕೊಪ್ಪಳದಲ್ಲಿ ರೈತ ನಾಯಕಕೋಡಿಹಳ್ಳಿ ಚಂದ್ರಶೇಖರ್ ನನ್ನ ಬಗ್ಗೆ ಬಹಳ ಕೀಳಾಗಿ ಮಾತನಾಡಿದ್ದಾರೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಒಬ್ಬ ಸಿನಿಮಾದವರನ್ನ ಸಿಎಂ ಸಚಿವರನ್ನಾಗಿ ಮಾಡಿದ್ದಾರೆ. ಅಲ್ಲದೇ ಕೃಷಿ ಪದವಿ ಪರೀಕ್ಷೆಗಳನ್ನ ರದ್ದು ಮಾಡಿ ದುಡ್ಡು ಮಾಡೋಕೆ ಹೊರಟಿದ್ದಾರೆ ಅಂತಾ ನನ್ನ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದ್ದಾರೆ. ಈ ರೀತಿ ಆರೋಪ ಅವರು ನನ್ನ ಮೇಲೆ ಮಾಡಬಹುದಾ? ಎಂದು ಬಿಸಿ ಪಾಟೀಲ್ ಪ್ರಶ್ನಿಸಿದರು.
ನಾನು ರೈತ ಕುಟುಂಬದ ಹಿನ್ನೆಲೆಯಿಂದಲೇ ಬೆಳೆದು ಬಂದವನು. ಈ ಕಾರಣಕ್ಕಾಗಿ ನಾನು ಅವರಿಗೆ ಜ್ಞಾನದ ಕೊರತೆ ಇದೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು. ಪ್ರತಿಭಟನಾನಿರತ ರೈತರನ್ನ ಭೇಟಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೋಡೋಣ ನಮ್ಮ ಮುಖ್ಯಮಂತ್ರಿಗಳು ಏನು ಹೇಳ್ತಾರೋ ಹಾಗೆ ಮಾಡುತ್ತೇನೆ ಎಂದು ತಿಳಿಸಿದರು.
ಈಗಾಗಲೇ 79(A)(B)(C) ತಿದ್ದುಪಡಿ ಕಾಯಿದೆ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಆಗಿ ಸುಗ್ರೀವಾಜ್ಞೆ ಬರ್ತಿದೆ. ಯಾರು ಬೇಕಾದ್ರೂ ರೈತರು ಆಗಬಹುದು. ಎಲ್ಲಿ ಬೇಕಾದ್ರೂ ಜಮೀನು ಕೊಳ್ಳಬಹುದು. ಎಪಿಎಂಸಿ ಕಾಯ್ದೆ ಪ್ರಕಾರ ನನ್ನ ಬೆಳೆ ನನ್ನ ಹಕ್ಕು ಎನ್ನುವ ಅಧಿಕಾರ ಕೊಟ್ಟಿದ್ದೇವೆ.
ಮಧ್ಯವರ್ತಿಗಳ ಹಾವಳಿ ಕಡಿಮೆ ಆಗತ್ತದೆ. ಎಪಿಎಂಸಿಗೆ ಹೋಗಿ ಮಾರಬೇಕಾದ್ರೆ ಲೋಡಿಂಗ್, ಅನ್‌ಲೋಡಿಂಗ್ ವೆಚ್ಚ ಹೋಗುತ್ತದೆ. ಎಪಿಎಂಸಿ ಕಾಯ್ದೆ ಜಾರಿಗೆ ತರ್ತಿರೋದು ಸೂಕ್ತವಾಗಿದೆ. ಇದರಿಂದ ಯಾವ ರೈತರು ಕೂಡ ಬೀದಿಗೆ ಬೀಳುವುದಿಲ್ಲ. ರೈತರು ಆತಂಕ ಪಡುವ ಅಗತ್ಯ ಇಲ್ಲ ಎಂದರು.