ಬೆಂಗಳೂರು: ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿಗೆ ಸುಮಾರು 1.57 ಕೋಟಿ ರೂ. ಆರ್ಥಿಕ ಸಹಾಯ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ಸಂಜೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗೃಹ ಇಲಾಖೆ ಮಾಜಿ ಸೈನಿಕರಿಗೆ ಹಲವಾರು ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಪ್ರತಿ ವರ್ಷ ನಿವೃತ್ತ ಸೈನಿಕರ ನೇಮಕ:
ಅಗ್ನಿಶಾಮಕ ಇಲಾಖೆ ಎಸ್ಡಿಆರ್ಎಫ್ಗೆ 107 ಮಂದಿ ನಿವೃತ್ತ ಸೈನಿಕರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಈಗಾಗಲೇ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಪ್ರತಿ ವರ್ಷವೂ ಸುಮಾರು 100 ಮಂದಿ ನಿವೃತ್ತ ಸೈನಿಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಅದೇ ರೀತಿ, ರೈಲ್ವೆ ಗೇಟ್ ಮನ್ ಹುದ್ದೆಗೆ 400 ಮಂದಿಯನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು. ಇನ್ನು ವಿಧವೆಯರಿಗೆ ಅನುದಾನ ಹೆಚ್ಚಿಸಿದ್ದು, ನಿವೃತ್ತ ಸೈನಿಕರಿಗೆ ನಿವೇಶನ ಕೊಡುವ ಬಗ್ಗೆಯೂ ಚಿಂತನೆ ನಡೆದಿದೆ. ಈ ಕುರಿತು ಬಿಡಿಎ ಜೊತೆಗೆ ಮಾತುಕತೆ ನಡೆಸಲಾಗುವುದು ಎಂದರು.
ಎರಡು ಮಕ್ಕಳನ್ನು ದತ್ತು ಪಡೆಯಲು ತೀರ್ಮಾನ :
ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ನಡೆದ ಕಾರ್ಯಚರಣೆಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ದಿವಂಗತ ಸುಬೇದಾರ್ ವೀರೇಶ ಕುರಹಟ್ಟಿ ಅವರ ಇಬ್ಬರು ಮಕ್ಕಳನ್ನು ದತ್ತು ಪಡೆದು ನಮ್ಮ ಟ್ರಸ್ಟ್ ಮೂಲಕ ಪದವಿವರೆಗೂ ವಿದ್ಯಾಭ್ಯಾಸ ಕೊಡಿಸಲಾಗುವುದು ಎಂದು ಸಚಿವ ಬೊಮ್ಮಾಯಿ ತಿಳಿಸಿದರು.
ಸೈನಿಕರ ಜೊತೆ ಇದ್ದಾಗ ರಾಷ್ಟ್ರ ಪ್ರೇಮ ತಾನಾಗಿಯೇ ಬರುತ್ತದೆ ಎಂದ ಅವರು, ನಮ್ಮ ಸರ್ಕಾರಿ ನೌಕರರು ಕೆಲಸ ಪಡೆಯುವಾಗ ತಮ್ಮದೇ ಜಿಲ್ಲೆಯಲ್ಲಿರಬೇಕು. ಕುಟುಂಬದೊಂದಿಗೆ ಇರಬೇಕು. ಮದುವೆ ಆದ ಮೇಲೆ ಒಂದೇ ಕಡೆ ದಂಪತಿ ಇರಬೇಕು ಎಂದು ಬಯಸುತ್ತಾರೆ. ಇದು ಸಾಮಾನ್ಯ. ಆದರೆ, ಸೈನಿಕರು ಎಲ್ಲೋ ಹುಟ್ಟಿ, ಮತ್ತೆಲ್ಲೋ ಬೆಳೆದು ಕೆಲಸ ಇನ್ನೆಲ್ಲೋ ಮಾಡುತ್ತಾರೆ. ತಮ್ಮ ಕುಟುಂಬವನ್ನು ಬಿಟ್ಟು ಗಡಿಯಲ್ಲಿ, ಹಿಮದಲ್ಲಿ, ಸಮುದ್ರದಲ್ಲಿ ಜೀವದ ಹಂಗು ತೊರೆದು ದೇಶಸೇವೆ ಮಾಡುತ್ತಾರೆ ಎಂದು ಶ್ಲಾಘಿಸಿದರು.
ಯುದ್ಧ ಹಾಗೂ ಯುದ್ಧದಂತಹ ಕಾರ್ಯಾಚರಣೆಯಲ್ಲಿ ಬಲಿದಾನ ಮಾಡಿದ ವೀರ ಯೋಧರ ಪರಿವಾರದ ಲಲಿತಾ ವೀರೇಶ ಕುರಹಟ್ಟಿ ಅವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಧ್ವಜ ದಿನಾಚರಣೆಯ ಧ್ವಜಗಳನ್ನು ಬಿಡುಗಡೆಗೊಳಿಸಿದ ಗೃಹ ಸಚಿವರು, ಧ್ವಜ ನಿಧಿ ಸಂಗ್ರಹಿಸಿದ ವಿವಿಧ ಜಿಲ್ಲೆ ಮತ್ತು ಸಂಸ್ಥೆಗಳಿಗೆ ಪ್ರೋತ್ಸಾಹಕ ಪಾರಿತೋಷಕವನ್ನು ವಿತರಿಸಿದರು.
ಇದನ್ನೂ ಓದಿ:ಕಾರ್ಗಿಲ್ ವಿಜಯ ದಿವಸ : 11 ಯೋಧರ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ಹಸ್ತಾಂತರ