ಬೆಂಗಳೂರು: ರೈತರ ಪ್ರತಿಭಟನೆ ಹಿನ್ನೆಲೆ ಜನರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ರೈತರಿಂದ ಹೆದ್ದಾರಿ ತಡೆ ಪ್ರತಿಭಟನೆ ಸಂಬಂಧ ಮಾತನಾನಾಡಿದ ಅವರು, ರಾಜ್ಯಾದ್ಯಂತ ರೈತ ಸಂಘಟನೆಗಳು ಹೆದ್ದಾರಿ ಚಳವಳಿಯನ್ನ ಮಾಡುತ್ತಿವೆ. ಎಲ್ಲಾ ಜಿಲ್ಲೆಗಳಲ್ಲಿ ರೈತ ಸಂಘಟನೆಗಳ ಜೊತೆ ಮಾತನಾಡಿ ಸುಗಮ ಸಂಚಾರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ಯಾವುದೇ ಸಮಸ್ಯೆ ಆಗದೇ ಸುಗಮ ಸಂಚಾರವಾಗಲಿದೆ ಎಂದರು.
ಪಂಚಮಸಾಲಿ ಲಿಂಗಾಯತ ಒಬಿಸಿ ಅಂತ ಗುರುತಿಸಿದ್ದೇ ಬಿಎಸ್‌ವೈ:
ಲಿಂಗಾಯತರಿಗೆ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿದ ಬೊಮ್ಮಾಯಿ ಪಂಚಮಸಾಲಿ ಲಿಂಗಾಯತ ಸಮುದಾಯ ಹಿಂದುಳಿದ ವರ್ಗ ಅಂತ ಗುರುತಿಸಿದವರೇ ಯಡಿಯೂರಪ್ಪ. ಹಿಂದಿನ ಬಾರಿ ಸಿಎಂ ಆಗಿದ್ದಾಗ ಪಂಚಮಸಾಲಿ ಲಿಂಗಾಯತ ಸಮಯದಾಯವನ್ನು 3ಬಿ ಗೆ ಗುರುಸಿದ್ದೇ ಯಡಿಯೂರಪ್ಪ. ಈ ಕೆಲಸವನ್ನು ಬೇರೆ ಯಾರೂ ಮಾಡಲಿಲ್ಲ. ಈಗ 2ಎ ಮೀಸಲಾತಿಗೆ ಪ್ರಸ್ತಾವನೆ ಬಂದಿದೆ. ಈ ಪ್ರಸ್ತಾವನೆಯನ್ನೂ ಸಿಎಂ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳಿಸಿಕೊಟ್ಟಿದ್ದಾರೆ. ಈ ಬೇಡಿಕೆ ಸಂಬಂಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಕೆಲವು ರಾಜ್ಯಗಳು ಇದೇ ಪ್ರಸ್ತಾವನೆ ಮಾಡಿದಾಗ ಕೋರ್ಟ್ ತಡೆ ನೀಡಿರುವುದು ಉಂಟು. ಇದೆಲ್ಲವನ್ನೂ ಗಮನಿಸಬೇಕಾಗುತ್ತದೆ ಎಂದು ವಿವರಿಸಿದರು.