ಬೆಂಗಳೂರು: ತಮ್ಮನ್ನೂ ಸೇರಿ ರಾಜ್ಯದ ನಾಲ್ವರು ಪ್ರಮುಖರನ್ನು ಹತ್ಯೆ ಮಾಡುವುದಾಗಿ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಅವರಿಗೆ ಬೆದರಿಕೆ ಪತ್ರ ಬಂದಿರುವುದರಿಂದ ತಮಗೆ ಸೂಕ್ತ ರಕ್ಷಣೆ ನೀಡುವಂತೆ ಸಚಿವೆ ಲಲಿತಾ ನಾಯಕ್ ಸಂಜಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಪ್ರಕರಣದ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ "ಲಲಿತಾ ನಾಯಕ್ ಅವರಿಗೆ ಜೀವ ಬೆದರಿಕೆ ಪತ್ರ ಬಂದಿರುವ ವಿಚಾರ ಗಮನಿಸಿರುವೆ. ಪ್ರಕರಣದ ಬಗ್ಗೆ ಆದಷ್ಟು ಬೇಗ ತನಿಖೆ ನಡೆಸಿ, ಇದರ ಹಿಂದೆ ಯಾರೇ ಇದ್ದರೂ ಅವರನ್ನು ಬಂಧಿಸಲಾಗುವುದು." ಎಂದು ಸಚಿವರು ಆಶ್ವಾಸನೆ ನೀಡಿದ್ದಾರೆ.
ದೂರಿನಲ್ಲೇನಿದೆ:
"ಮಾ.20ರಂದು ಅಂಚೆಯ ಮೂಲಕ ಪತ್ರವೊಂದು ಬಂದಿದ್ದು, ಅದರಲ್ಲಿ ಕರ್ನಾಟಕದಲ್ಲಿ ನಾಲ್ವರನ್ನು ಕೊಲೆ ಮಾಡುವ ಸುಳಿವು ನೀಡಲಾಗಿದೆ. ಕೊಲೆಗಡುಕರ ಪೂರ್ವೋತ್ತರ ಚಟುವಟಿಕೆಗಳನ್ನು ಈ ಪತ್ರದಲ್ಲಿ ವಿವರಿಸಲಾಗಿದೆ. ಈ ಪತ್ರದ ಲಕೋಟೆಯ ಮೇಲೆ ಎಂ.ಡಿ. ಕಲೀಮ್ ಚಳ್ಳಕೆರೆ ಎಂದು ನಮೂದಿಸಲಾಗಿದೆ. ಆದ್ದರಿಂದ ನನ್ನ ಜೀವ ರಕ್ಷಣೆಗೆ ತಾವು ಕೂಡಲೇ ಕ್ರಮ ತೆಗೆದುಕೊಳ್ಳಬೇಕಾಗಿ ವಿನಂತಿಸುತ್ತೇನೆ." ಎಂದು ದೂರಿನಲ್ಲಿ ಲಲಿತಾ ನಾಯಕ್ ಮನವಿ ಮಾಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಪರಿಶೀಲಿಸಿ ಮೇಲಾಧಿಕಾರಿಗಳ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ನಾಲ್ಕು ಜನರನ್ನು ಕೊಲ್ಲುವುದಾಗಿ ಬೆದರಿಕೆ :
ಬಿಟಿ ಲಲಿತಾ ನಾಯಕ್ ಅವರಿಗೆ ಬಂದಿರುವ ಬೆದರಿಕೆ ಪತ್ರ ಮಾಜಿ ಸಚಿವ ರೇವಣ್ಣ ಅವರು ಸಾರ್ವಜನಿಕ ಜೀವನದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಲಲಿತಾ ನಾಯಕ್, ನನ್ನನ್ನೂ ಸೇರಿದಂತೆ ಬಿಜೆಪಿ ನಾಯಕ ಸಿಟಿ ರವಿ, ನಟ ಶಿವರಾಜ್‌ಕುಮಾರ್, ಖಾಸಗಿ ಚಾನೆಲ್ ಸಂಪಾದಕ ಹೆಚ್.ಆರ್. ರಂಗನಾಥ್ರನ್ನು ಕೊಲೆ ಮಾಡುವುದಾಗಿ ಪತ್ರ ಬಂದಿದೆ. ಮೇ 1ರಂದು ಪ್ರಮುಖರನ್ನು ಕೊಲೆ ಮಾಡುವುದಾಗಿ ಹೇಳಿದ್ದು, ಕೊಲೆಗಾರರು ಎಲ್ಲಿ ಬೇಕಾದರೂ ಕೊಲೆ ಮಾಡಬಹುದು, ಆದರೆ ನಾನು ಹೆದರುವುದಿಲ್ಲ. ಹೀಗಾಗಿ ಈ ಅಭಿನಂದನಾ ಸಮಾರಂಭಕ್ಕೂ ಬಂದಿದ್ದೇನೆ ಎಂದಿದ್ದರು.
"ಸಿ.ಟಿ. ರವಿ ಅವರನ್ನು ಕೊಲೆ ಮಾಡಿದರೆ ನಾನು ಉಳಿಯುತ್ತೇನೆ. ನನ್ನನ್ನು ಕೊಲೆ ಮಾಡಿದರೆ ಸಿಟಿ ರವಿ ಉಳಿಯುತ್ತಾರೆ. ಈ ರೀತಿಯ ಗೊಂದಲದ ಸಂದೇಶವನ್ನು ಆ ಪತ್ರ ಸೃಷ್ಟಿಸಿದೆ. ಯಾರೋ ಹುಡುಗಾಟಿಕೆಗೆ ಇದನ್ನು ಬರೆದಿರಬಹುದು ಎಂದೆನಿಸುತ್ತದೆ. ಹಂತಕರು ಕೇರಳದ ಮಹಮ್ಮದ್ ರಸೂಲ್ ಹಾಗೂ ಹಾಸನದ ಮುಸ್ತಾಫ ಅಲಿಖಾನ್‌ರಿಂದ ಸುಪಾರಿ ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ನಾಲ್ಕು ಜನಕ್ಕೆ ಪೊಲೀಸರು ರಕ್ಷಣೆ ನೀಡಬೇಕು." ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.