ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ನಡೆಸಲಿರುವ ಎಸ್ಐಟಿ ಆದಷ್ಟು ಬೇಗ ವರದಿ ನೀಡಲಿದೆ. ಪ್ರಾಥಮಿಕ ತನಿಖೆಯ ಬೆಳವಣಿಗೆ ನೋಡಿ ಅವಶ್ಯಕತೆ ನೋಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ಸಿಡಿ ಹಿಂದೆ ಷಡ್ಯಂತ್ರ ಇದೆ ಎಂದು ಪತ್ರ ಬರೆದಿದ್ದರು. ಹೀಗಾಗಿ ಪ್ರಕರಣವನ್ನು ಎಸ್ಐಟಿ ತನಿಖೆಗೆ ಕೊಟ್ಟಿದ್ದೇವೆ. ಇಷ್ಟು ದಿನದಲ್ಲೆ ತನಿಖೆ ಮುಗಿಸಿ ಎಂದು ಸಮಯ ನಿಗದಿ ಮಾಡಲು ಆಗಲ್ಲ. ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. ರಾಜ್ಯದ ಜನತೆಗೆ ಸತ್ಯ ಗೊತ್ತಾಗಲಿ ಎಂದು ಶೀಘ್ರವಾಗಿ ಕೊಡಿ ಎಂದು ಹೇಳಿದ್ದೇವೆ ಎಂದರು.
ಎಸ್ಐಟಿಯವರು ಸಂಪೂರ್ಣ ತನಿಖೆ ನಡೆಸುತ್ತಾರೆ. ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವಾಪಸ್ ಪಡೆದಿದ್ದು ಎಲ್ಲವನ್ನೂ ಎಸ್ಐಟಿ ನೋಡುತ್ತದೆ. ಪತ್ರದ ಮೇಲೆ ಪ್ರಾಥಮಿಕ ತನಿಖೆ ನಡೆಯುತ್ತದೆ. ತನಿಖೆಯ ಬೆಳವಣಿಗೆ ನೋಡಿ ಅವಶ್ಯಕತೆ ಎನಿಸಿದರೆ ಎಫ್ಐಆರ್ ದಾಖಲಿಸಲಾಗುತ್ತದೆ ಎಂದರು.