ಬೆಂಗಳೂರು:ಹೆಚ್ಡಿಕೆ ಗಾಳಿಯಲ್ಲಿ ಗುಂಡು ಹೊಡಿಯೋದು, ಅದಕ್ಕೆ ಈಗ 19 ಸ್ಥಾನಕ್ಕೆ ಇಳಿದಿದ್ದಾರೆ ಎಂದು ಯುವ ಸಬಲೀಕರಣ, ಕ್ರೀಡೆ ಮತ್ತು ಬುಡಕಟ್ಟು ಕಲ್ಯಾಣ ಸಚಿವ ಬಿ ನಾಗೇಂದ್ರ ಟೀಕಿಸಿದರು. ವಿಧಾನಸೌಧದಲ್ಲಿ ಹೆಚ್ ಡಿಕೆಯವರ ವೈಎಸ್ಟಿ ತೆರಿಗೆ ಆರೋಪಕ್ಕೆ ಪ್ರತಿಕ್ರಿಯಿಸುತ್ತ, ಅವರು ಎರಡು ಬಾರಿ ಸಿಎಂ ಆಗಿದ್ದವರು. ಸಿಎಂ ಆಗಿದ್ದಾಗ ಇಲಾಖೆ ಯಾವ ರೀತಿ ನಡೆಸಿದರು ಎಂದು ಗೊತ್ತಿದೆ.
ಸಿಎಂ ಸುಪುತ್ರ ಯಾವುದರಲ್ಲೂ ಹಸ್ತಕ್ಷೇಪ ಮಾಡಿಲ್ಲ. ಆಧಾರ ರಹಿತ ಆರೋಪ ಮಾಡಿದ್ದಾರೆ. ಅದಕ್ಕೆ ಅವರ ಪಕ್ಷ 19 ಸ್ಥಾನಕ್ಕೆ ಇಳಿದಿದೆ. ಜನ ಮುಂದೆಯೂ ಅವರಿಗೆ ಪಾಠ ಕಲಿಸ್ತಾರೆ. ವರ್ಗಾವಣೆ ಕೇಳಿದಾಗ ಶಿಫಾರಸು ಮಾಡೋದು ಸಹಜ. ಮಾಜಿ ಸಿಎಂ ಹೇಳಿಕೆ ಹಾಸ್ಯಾಸ್ಪದ ಎಂದು ತಿರುಗೇಟು ನೀಡಿದರು.
ವದಂತಿ ಮಾತನ್ನು ಅವರು ಹೇಳುತ್ತಿದ್ದಾರೆ. ಇದು ಅವರ ಸ್ಥಾನಕ್ಕೆ ಗೌರವ ತರಲ್ಲ. ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಈ ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಈಗಲೂ ಅದನ್ನು ಅವರು ಮುಂದುವರಿಸುತ್ತಿದ್ದಾರೆ. ಹೀಗೆ ಅವರು ಮುಂದುವರಿದರೆ ಲೋಕಸಭೆಯಲ್ಲಿ ಜನರು ಪಾಠ ಕಲಿಸುತ್ತಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸ್ಪಷ್ಟವಾದ ಆಡಳಿತ ಕೊಡುತ್ತಿದ್ದಾರೆ. ಯಾವುದೇ ಭ್ರಷ್ಟಾಚಾರ ನಡೆಯುತ್ತಿಲ್ಲ. ಉತ್ತಮ ಆಡಳಿತ ನೀಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದರು.