ಬೆಂಗಳೂರು:ಮದರಸಾಗಳಿಗೆ ಹೋಗುವ ಮಕ್ಕಳಿಗೆ ನೀಡಲಾಗುತ್ತಿರುವ ಔಪಚಾರಿಕ ಶಿಕ್ಷಣದ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಮದರಸಾಗಳಲ್ಲಿ ಹಾಲಿ ನೀಡಲಾಗುತ್ತಿರುವ ಶಿಕ್ಷಣದ ಸ್ವರೂಪದ ಕುರಿತು ವರದಿ ಪಡೆದುಕೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ತಿಳಿಸಿದರು.
ಔಪಚಾರಿಕ ಶಿಕ್ಷಣದ ಮಾಹಿತಿ: ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಅವರು ಸಭೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆ ಸಚಿವರು ಮಾತನಾಡಿ, ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆದ ಬಳಿಕ ವಿಜ್ಞಾನ ಮತ್ತು ಗಣಿತ ಕುರಿತು ಔಪಚಾರಿಕ ಶಿಕ್ಷಣ ಪಡೆಯಲು ಹತ್ತಿರದ ಶಾಲೆಗಳಿಗೆ ವಿದ್ಯಾರ್ಥಿಗಳು ಹಾಜರಾಗಬೇಕು ಎಂಬ ನಿಯಮವಿದೆ. ಆದರೆ, ಮದರಸಾದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು, ಯಾವ ಪ್ರಮಾಣದಲ್ಲಿ ಔಪಚಾರಿಕ ಶಿಕ್ಷಣ ಪಡೆಯುತ್ತಿದ್ದಾರೆಂಬ ಸ್ಪಷ್ಟ ಮತ್ತು ನಿಖರ ಮಾಹಿತಿ ಲಭ್ಯವಿಲ್ಲ.
ಶಿಕ್ಷಣದ ಸ್ವರೂಪ ತಿಳಿಯುವುದು ಅಗತ್ಯ: ಈ ಹಿನ್ನೆಲೆಯಲ್ಲಿ ಮದರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರಾಜ್ಯದಲ್ಲಿರುವ ಮದರಸಾಗಳಲ್ಲಿನ ಶಿಕ್ಷಣದ ಸ್ವರೂಪ ತಿಳಿಯುವ ಅಗತ್ಯವಿದೆ. ಮದರಸಾಗಳಿಗೆ ಹೋಗುವ ಮಕ್ಕಳಿಗೆ ಔಪಚಾರಿಕ ಶಿಕ್ಷಣ ಸಿಗುತ್ತಿಲ್ಲ. ಮುಖ್ಯವಾಗಿ ಗಣಿತ ಮತ್ತು ವಿಜ್ಞಾನದ ಕುರಿತು ಬೋಧನೆ ದೊರೆಯುವಂತೆ ಮಾಡಬೇಕು ಎಂದು ಪಾಲಕರು ಒತ್ತಾಯಿಸಿದ್ದರು.