ಬೆಂಗಳೂರು:ನ್ಯಾಯಾಲಯದ ತೀರ್ಪಿನಂತೆ ಶಾಲೆ ನಡೆಸುತ್ತೇವೆ. ಶಾಲೆಯ ಸಮವಸ್ತ್ರ ಹಾಕಿಕೊಂಡು ವಿದ್ಯಾರ್ಥಿಗಳು ಬರಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನವಿ ಮಾಡಿದ್ದಾರೆ.
ಸಿಎಂ ಜೊತೆ ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾಳೆ ಒಂದು ಸಭೆ ಮತ್ತು ಸೋಮವಾರ ಮತ್ತೊಂದು ಸಭೆ ನಡೆಯಲಿದೆ. ನಂತರ ಪಿಯುಸಿ, ಪದವಿ ಕಾಲೇಜುಗಳು ನಡೆಯಲಿದೆ ಎಂದು ಹೇಳಿದರು.
ಕಳೆದ ಮೂರು ದಿನದಿಂದ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಕೇಸ್, ಒಂದು ಹಂತದಲ್ಲಿ ನಿರ್ಣಯ ಕೊಟ್ಟಿದೆ. ಅದರಂತೆ ಸೋಮವಾರದಿಂದ ಎಲ್ಲ ಶಾಲೆಗಳು ಆರಂಭವಾಗುತ್ತವೆ. ಕೋವಿಡ್ ಮೂರನೇ ಅಲೆಯಲ್ಲೂ ಶಾಲೆ ನಡೆಸಿ ಶಿಕ್ಷಣ ನಡೆಸಿದ್ದೇವೆ. ನಮ್ಮೆಲ್ಲ ತರಗತಿ ನಡೆದಿದೆ. ಕರ್ನಾಟಕ ಜನತೆ ಕೋರ್ಟ್ ತೀರ್ಪಿನ ವಿರುದ್ದ ನಡೆದಿಲ್ಲ. ಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷೆಗೆ ಎಲ್ಲ ಮಕ್ಕಳು ತಯಾರಿ ನಡೆಸಲಿದ್ದಾರೆ ಎಂದರು.
ಸಚಿವ ಅಶ್ವಥ್ ನಾರಾಯಣ್ ಮಾತನಾಡಿ, ಹಲವು ವರ್ಷದಿಂದ ಸಮವಸ್ತ್ರ ಹಾಕಿಕೊಳ್ಳಲು ಕಾನೂನು ರೂಪಿಸಲಾಗಿದೆ. ಆ ಪ್ರಕಾರ ವ್ಯವಸ್ಥೆ ನಡೆಯುತ್ತಿತ್ತು. ಸರ್ಕಾರ ಮಾಡಿರುವ ಸಮವಸ್ತ್ರ ಹಾಕಿ ಬರಬೇಕು. ಯಾವುದೇ ಹಿಜಾಬ್, ಕೇಸರಿ ಶಾಲು ಹಾಕಬಾರದು. ಲಾ ಆಂಡ್ ಆರ್ಡರ್ ಸಲಹೆಯಂತೆ ನಡೆಯಲಿದೆ ಎಂದರು.
ನಮ್ಮ ಸಮಾಜಕ್ಕೆ ಭಾವನೆಯ ವಿಚಾರದ ಮೇಲೆ ಘಟನೆ ನಡೆದಿದೆ. ಸರ್ಕಾರ ಹಾಗೂ ನ್ಯಾಯಾಲಯದ ಮೂಲಕ ಸ್ಪಷ್ಟನೆ ನೀಡಲಾಗಿದೆ. ಇದನ್ನು ನಿರ್ವಹಣೆ ಮಾಡಲು ಎಲ್ಲರೂ ಸಹಕಾರ ನೀಡಬೇಕು.
ಜೊತೆಯಲ್ಲಿ ಗೃಹ ಇಲಾಖೆ ಮುತುವರ್ಜಿ ಮೂಲಕ ಕ್ರಮ ತೆಗೆದುಕೊಳ್ಳಲಿದೆ. ಮಕ್ಕಳಿಗೆ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ ಇದೆ. ತ್ವರಿತವಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಕೆಲವು ವಿವಿಗಳಲ್ಲಿ ಆನ್ ಲೈನ್ ತರಗತಿ ನಡೆಯುತ್ತಿದೆ. ಗೆಸ್ಟ್ ಲೆಕ್ಚರರ್ ಪ್ರತಿಭಟನೆ ಕೂತಿದ್ದಾರೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ನಾವು ಪರಿಸ್ಥಿತಿ ನೋಡುತ್ತಿದ್ದೇವೆ. ಎಲ್ಲ ಕ್ಯಾಂಪಸ್ ಶಾಂತಿಯಲ್ಲಿವೆ. ಪೊಲೀಸರು ಪರಿಸ್ಥಿತಿ ನಿಭಾಯಿಸ್ತಿದ್ದಾರೆ. ಸೋಮವಾರದಿಂದ ಹತ್ತರವರೆಗೂ ಶಾಲೆ ನಡೆಯಲಿದೆ. ಮುಂದಿನ ಆದೇಶದ ವರೆಗೂ ಪಿಯು ರಜೆ ಇರಲಿದೆ ಎಂದು ತಿಳಿಸಿದರು.
ಕೋವಿಡ್ ಬಂದು ಎಲ್ಲಾ ಹಾಳಾಗಿದೆ. ಈಗ ಶಾಲೆ ತರಗತಿ ನಡೆಯಬೇಕು. ಪೋಷಕರು ಸಹಕರಿಸಬೇಕು. ಮಕ್ಕಳು ಓದಲು ಅನುವು ಮಾಡಿಕೊಡಬೇಕು. ನಾವು ಕೋರ್ಟ್ ಸೂಚನೆಯಂತೆ ಶಾಲೆ ಆರಂಭಿಸುತ್ತೇವೆ. ನಮ್ಮ ಎಳೆಯ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸ ಆಗಬಾರದು. ಕಾನೂನು ಲಾಠಿ ಬಳಸುವಂತೆ ಆಗಬಾರದು ಎಂದು ಹೇಳಿದರು.
ಇದನ್ನೂ ಓದಿ : ಪ್ರಕರಣ ಇತ್ಯರ್ಥವಾಗುವವರೆಗೆ ಧಾರ್ಮಿಕ ಸಂಕೇತದ ಉಡುಪು ಧರಿಸುವಂತಿಲ್ಲ.. ವಿಸ್ತೃತ ಪೀಠದಲ್ಲಿ ಹೀಗಿತ್ತು ವಾದ ಸರಣಿ!