ಬೆಂಗಳೂರು : ರಾಜ್ಯ ಹೈಕೋರ್ಟ್ ಹಿಜಾಬ್ ವಿಚಾರದಲ್ಲಿ ತೀರ್ಪು ನೀಡುವವರೆಗೂ ವಿದ್ಯಾರ್ಥಿಗಳು ಹಿಜಾಬ್ ಧರಿಸದೇ ಕಾಲೇಜಿಗೆ ಬನ್ನಿ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಕರೆ ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂದರ್ಭ, ಹೈಕೋರ್ಟ್ ನಿಂದ ತೀರ್ಪು ಪ್ರಕಟವಾದ ತಕ್ಷಣ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಅದಕ್ಕೆ ಮುಂದೆ ಪ್ರತಿಯೊಬ್ಬರು ಬದ್ದರಾಗಬೇಕಾಗುತ್ತದೆ. ಈಗ ನೆಲದ ಕಾನೂನು ಏನಿದೆಯೋ ಅದನ್ನು ಪಾಲಿಸಬೇಕಾಗುತ್ತದೆ. ಅದನ್ನು ಒಪ್ಪಿಕೊಂಡು ಶಾಲಾ - ಕಾಲೇಜುಗಳಿಗೆ ಬನ್ನಿ. ಪಾಠವನ್ನು ಕಲಿತು ಎಕ್ಸಾಮ್ ಬರೆದು ನಿಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುವ ಕಾರ್ಯ ಮಾಡಿ ಎಂದು ಮನವಿ ಮಾಡಿದರು.
ಪಾಪ ಮಕ್ಕಳು ಯಾರದ್ದೋ ಪ್ರಚೋದನೆಗೆ ಒಳಗಾಗಿ ಶಾಲೆ ಬಾಯ್ಕಾಟ್ ಮಾಡುವ ನಿರ್ಣಯ ತೆಗೆದುಕೊಂಡಿದ್ದಾರೆ. ಈ ಘಟನೆಯನ್ನು ಬಳಕೆ ಮಾಡಿಕೊಂಡು ಕೆಲ ಸಂಘಟನೆಗಳು ಕುಮ್ಮಕ್ಕು ಕೊಟ್ಟವು. ಕೆಲ ರಾಜಕೀಯ ಪಕ್ಷಗಳು ಇದನ್ನೂ ಬಳಸಿಕೊಂಡವು. ರಾಜ್ಯದ ಪರಿಸ್ಥಿತಿ ಗೃಹ ಸಚಿವರಿಗೆ ಸಿಗುತ್ತದೆ ಹೀಗಾಗಿ ಅವರ ಜೊತೆ ಚರ್ಚೆ ಮಾಡ್ತೇವೆ ಎಂದು ಹೇಳಿದರು.