ಬೆಂಗಳೂರು: ಹಿಜಾಬ್ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ಗೆ ಅಪೀಲು ಹೋಗುವ ಮೂಲಕ ಕಾಂಗ್ರೆಸ್ಸಿಗರ ನಿಜ ಬಣ್ಣ ಬಯಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆಕ್ರೋಶ ವ್ಯಕ್ತಪಡಿಸಿದರು.
ಶಕ್ತಿ ಭವನದಲ್ಲಿ ಮಾತನಾಡಿದ ಅವರು, ಇದರ ಹಿಂದೆ ಯಾರಿದ್ದಾರೆ ಎಂಬುದು ಈಗ ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗಿದೆ. ಕಾಂಗ್ರೆಸ್ನ ಯೂತ್ ಸಂಘಟನೆಯ ಅಧ್ಯಕ್ಷರು ಸುಪ್ರೀಂಕೋರ್ಟ್ ಹೋಗಿದ್ದಾರೆ. ಸುಪ್ರೀಂ ಕೋರ್ಟ್, ಸದ್ಯಕ್ಕೆ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಯಾವಾಗ ನಾವು ಮಧ್ಯಪ್ರವೇಶ ಆಗಬೇಕು ಎಂಬುದು ನಮಗೆ ಗೊತ್ತಿದೆ. ಆವಾಗ ಆಗುತ್ತೇವೆ ಎಂದು ತಿಳಿಸಿದೆ. ಇಷ್ಟು ದಿನ ನಾವು ಮಧ್ಯಪ್ರವೇಶ ಮಾಡುತ್ತಿಲ್ಲ ಅಂತಿದ್ದರು. ಈಗ ಯಾರು ಮಧ್ಯಪ್ರವೇಶ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಾಗಿದೆ ಎಂದು ತಿಳಿಸಿದರು.
ವಿದೇಶಿಗರ ಕೈವಾಡದ ಅನುಮಾನ:ಅನೇಕ ರಾಷ್ಟ್ರಗಳಲ್ಲಿ ಹಿಜಾಬ್ ನಿಷೇಧ ಆದಾಗಲೂ ಯಾರೂ ಪ್ರಶ್ನೆ ಮಾಡಿಲ್ಲ. ಪಾಕಿಸ್ತಾನದಿಂದಲೂ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿರಲಿಲ್ಲ. ಈಗ ಏಕೆ ಬಂದಿದೆ?. ಕೇರಳದಲ್ಲೂ ಹಿಜಾಬ್ ಬಗ್ಗೆ ಹೈಕೋರ್ಟ್ ಆದೇಶ ಆಗಿತ್ತು. ಆವಾಗ ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳು ವರದಿ ಮಾಡಿರಲಿಲ್ಲ. 2015ರಲ್ಲಿ ಮುಂಬೈ ಹೈಕೋರ್ಟ್ ಆದೇಶ ಬಂದಾಗಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿರಲಿಲ್ಲ. ಈಗ ಏಕೆ ಆಗುತ್ತಿದೆ? ಎಂದು ಪ್ರಶ್ನಿಸಿದರು.