ಬೆಂಗಳೂರು:ನಾನು ಆ ಮಾತುಗಳನ್ನು ವ್ಯಕ್ತಿಗತವಾಗಿ ಹೇಳಿರುವಂತದ್ದಲ್ಲ. ರಾಜಕೀಯವಾಗಿ ಹಾಗೂ ಸೈದ್ಧಾಂತಿಕವಾಗಿ ಹೇಳಿರುವ ಮಾತುಗಳು ಅವು. ನನಗೆ ಸಿದ್ದರಾಮಯ್ಯ ಅವರ ಮೇಲೆ ಯಾವುದೇ ವೈಯ್ಯಕ್ತಿಕ ದ್ವೇಷವಿಲ್ಲ. ನಾನು ಹೇಳಿರುವ ಮಾತುಗಳನ್ನು ತಿರುಚಿ ಬಿತ್ತರಿಸುವುದು ಸಿದ್ದರಾಮಯ್ಯ ಅವರಿಗೆ ನಿಮಿಷದ ಕೆಲಸ. ನಾನು ಹೇಳಿದ ಮಾತುಗಳಿಂದ ಸಿದ್ದರಾಮಯ್ಯ ಅವರ ಮನಸ್ಸಿಗೆ ನೋವಾಗಿದ್ದರೆ ನಾನು ವಿಷಾದಿಸುತ್ತೇನೆ ಎಂದು ಸಚಿವ ಡಾ ಅಶ್ವತ್ಥನಾರಾಯಣ್ ಅವರು ಮರು ಹೇಳಿಕೆ ನೀಡಿದ್ದಾರೆ.
ಮಂಡ್ಯದ ಸಾತನೂರು ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವಾಗ ಸಚಿವ ಅಶ್ವತ್ಥ ನಾರಾಯಣ ಅವರು ಸಿದ್ದರಾಮಯ್ಯ ಅವರನ್ನು ಟಿಪ್ಪುವಿನಂತೆ ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡಿದ್ದರು. ಅಶ್ವತ್ಥನಾರಾಯಣ್ ಅವರ ಹೇಳಿಕೆಗಳಿಂಂದ ಆಕ್ರೋಶಗೊಂಡ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ಗಳ ಮೂಲಕ ಸಚಿವರಿಗೆ ಟಾಂಗ್ ನೀಡಿದ್ದರು. ಜನರನ್ನು ಯಾಕೆ ಪ್ರಚೋದಿಸುತ್ತೀರಾ? ಸ್ವತಃ ನೀವೇ ಕೋವಿ ಹಿಡಿದುಕೊಂಡು ಬನ್ನಿ ಎಂದು ಚಾಲೆಂಜ್ ಹಾಕಿದ್ದರು.
ಈ ಟ್ವೀಟ್ಗಳಿಗೆ ಮಾಧ್ಯಮಗಳ ಹಾಗೂ ಟ್ವೀಟ್ಗಳ ಮೂಲಕ ಪ್ರತಿಕ್ರಿಯೆ ನೀಡಿರುವ ಅಶ್ವತ್ಥ ನಾರಾಯಣ ಅವರು, ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಬೇಕು ಎಂಬರ್ಥದಲ್ಲಿ ಹೇಳಿದ ಮಾತಿಗೆ 'ಕೋವಿ ಹಿಡಿದು ಬನ್ನಿ' ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ನಮಗೆ ಮತಯಂತ್ರವೇ ಕೋವಿ, ಮತದಾರರು ಕಾಂಗ್ರೆಸ್ ವಿರುದ್ದ ಒತ್ತುವ ಒಂದೊಂದು ಮತಗಳೂ ಒಂದೊಂದು ಬುಲೆಟ್‌ಗಳೇ. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಅಂತಿಮ ಮೊಳೆ ಹೊಡೆಯಲು ಜನತೆಯೇ ತೀರ್ಮಾನಿಸಿದ್ದಾರೆ.
ಟಿಪ್ಪುವನ್ನು ಯಾವ ರೀತಿ ವಿಜೃಂಭಣೆ ಮಾಡುತ್ತಿದ್ದಾರೆ, ಅವರ ಜಯಂತಿಯನ್ನು ಯಾವ ರೀತಿ ಕಾಂಗ್ರೆಸ್ ಪಕ್ಷದವರು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಅದನ್ನು ಖಂಡಿಸುವಂತಹದ್ದು ಆಗಬೇಕು. ಅದರ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವಂತಹದ್ದಾಗಬೇಕು. ಬರುವಂತಹ ಚುನಾವಣೆಯಲ್ಲಿ ಜನರ ಬೆಂಬಲವನ್ನು ನಮ್ಮ ಪರವಾಗಿ ಪಡೆದುಕೊಳ್ಳಬೇಕು. ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕು ಎನ್ನುವ ಅರ್ಥದಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. ನಾವಿವತ್ತು ಪ್ರಜಾಪ್ರಭುತ್ವದಲ್ಲಿದ್ದೇವೆ. ಯಾವುದೋ ಯುದ್ಧದ ಕಾಲದಲ್ಲಿ ಇಲ್ಲ ನಾವು.