ಕರ್ನಾಟಕ

karnataka

ETV Bharat / state

ಡಿಜಿಟಲ್ ಆರ್ಥಿಕತೆಗೆ ರಾಜ್ಯದಿಂದ 300 ಬಿಲಿಯನ್ ಡಾಲರ್ ಕೊಡುಗೆ ಗುರಿ: ಸಚಿವ ಅಶ್ವತ್ಥನಾರಾಯಣ

ಸಿಐಐ ಇನ್ನೋವರ್ಜ್ ಸಮಾವೇಶವನ್ನು ಸಚಿವ ಅಶ್ವತ್ಥನಾರಾಯಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನವೋದ್ಯಮಗಳನ್ನು ಪ್ರೋತ್ಸಾಹಿಸಲು ಬೀಜನಿಧಿಯನ್ನು ಕೊಡುತ್ತಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ ಎಂದು ಹೇಳಿದರು.

CII Innovarge Conference
ಸಿಐಐ ಇನ್ನೋವರ್ಜ್ ಸಮಾವೇಶ

By

Published : Aug 25, 2022, 3:39 PM IST

ಬೆಂಗಳೂರು: ಮುಂದಿನ ಮೂರು ವರ್ಷಗಳಲ್ಲಿ ದೇಶದ ಡಿಜಿಟಲ್ ಆರ್ಥಿಕತೆಯು ಒಂದು ಟ್ರಿಲಿಯನ್ ಡಾಲರ್ ತಲುಪಲಿದೆ. ಇದಕ್ಕೆ ಕರ್ನಾಟಕ 300 ಶತಕೋಟಿ ಡಾಲರ್ ಕಾಣಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದರು.

ನಗರದಲ್ಲಿ ಗುರುವಾರ ಆರಂಭವಾದ ಮೂರು ದಿನಗಳ 18ನೇ ವರ್ಷದ ಸಿಐಐ ಇನ್ನೋವರ್ಜ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯವು ನಾವೀನ್ಯತೆ ಮತ್ತು ಸಂಶೋಧನೆಗಳಿಗೆ ಭಾರಿ ಮಹತ್ವ ನೀಡಿದ್ದು, ಅಗತ್ಯ ನೀತಿಗಳನ್ನು ಜಾರಿಗೆ ತಂದಿದೆ. ನವೋದ್ಯಮಗಳನ್ನು ಪ್ರೋತ್ಸಾಹಿಸಲು ಬೀಜನಿಧಿಯನ್ನು ಕೊಡುತ್ತಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ ಎಂದು ಹೇಳಿದರು.

ಕ್ವಾಂಟಂ ಮತ್ತು ಕೃತಕ ಬುದ್ಧಿಮತ್ತೆ ರೀತಿಯ ಅತ್ಯಾಧುನಿಕ ತಂತ್ರಜ್ಞಾನಗಳು ಇಂದು ಜಗತ್ತನ್ನು ಆಳುತ್ತಿವೆ. ಇದನ್ನು ಗಮನಿಸಿಯೇ ಸರ್ಕಾರ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ‌ ನೀತಿಯನ್ನು ತಂದಿದೆ ಎಂದರು.

ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ

ಪರಿಣಾಮಕಾರಿಯಾಗಿ ತಂತ್ರಜ್ಞಾನ ಬಳಕೆ: ಉನ್ನತ ಶಿಕ್ಷಣ ಕ್ಷೇತ್ರವನ್ನು ಜಾಗತಿಕ ಗುಣಮಟ್ಟದೊಂದಿಗೆ ಉದ್ಯಮಗಳ ಜತೆ ಬೆಸೆಯಲಾಗಿದೆ. ಇದರ ಸುಧಾರಣೆಗೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿ ಕೊಳ್ಳಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲೂ ವಿಶ್ವ ದರ್ಜೆಯ ಎಂಜಿನಿಯರಿಂಗ್ ಕಾಲೇಜು ಇರಬೇಕೆಂದು ಸೂಪರ್ 30 ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ: ಸಚಿವ ಅಶ್ವತ್ಥನಾರಾಯಣ

ಉದ್ಯಮ ವಲಯದ ನಿರೀಕ್ಷೆ ಅಪಾರ: ಉದ್ಯಮ ವಲಯದ ನಿರೀಕ್ಷೆ ಅಪಾರವಾಗಿದೆ. ಸರ್ಕಾರ ಇದಕ್ಕೆ ತಕ್ಕಂತೆ ಸಮರೋಪಾದಿಯಲ್ಲಿ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಇದು ಇನ್ನೂ ತೀವ್ರ ಸ್ವರೂಪದಲ್ಲಿ ನಡೆಯಬೇಕು ಎಂದು ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

ಕೆಂಪಣ್ಣ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ:ಟೆಕ್ ಇನ್ನೋವೇಶನ್ ಸಮ್ಮಿಟ್ ಉದ್ಘಾಟನೆ ಸಮಾರಂಭದ ಬಳಿಕ ಕೆಂಪಣ್ಣರ 40 % ಕಮಿಷನ್ ವಿಚಾರವಾಗಿ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಕೆಂಪಣ್ಣ ಜವಾಬ್ದಾರಿಯುತವಾಗಿ ಹೇಳಿಕೆಗಳನ್ನ ಕೊಡಬೇಕು. ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯಾರೇ ವ್ಯಕ್ತಿ ದಾಖಲೆ ಸಹಿತ ಆರೋಪ ಮಾಡಬೇಕು. ಈ ರೀತಿ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಅವರೇ ಅವಲೋಕನ ಮಾಡಿಕೊಳ್ಳಬೇಕು. ಪುರಾವೆಗಳಿಲ್ಲದೇ ಹುಚ್ಚುಚ್ಚಾಗಿ ಹೇಳಿಕೆ ಕೊಡುತ್ತಿದ್ದಾರೆ ಎಂದರು.

ABOUT THE AUTHOR

...view details