ಬೆಂಗಳೂರು: ನಮ್ಮ ಪಕ್ಷ, ನಮ್ಮ ಸರ್ಕಾರ ಜನಪರವಾಗಿದೆ. ಇದು ಯಾವುದೋ ಕಾಂಗ್ರೆಸ್, ಜೆಡಿಎಸ್ನಂತೆ ಪ್ರೈವೇಟ್ ಕಂಪನಿ ತರ ಅಲ್ಲ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ನಾವು ಚೆನ್ನಾಗಿ ಕೆಲಸ ಮಾಡ್ತಿದ್ದೇವೆ. ನಮ್ಮಲ್ಲಿ ಯಾರು ಏನು ಬೇಕಾದರೂ ಆಗಬಹುದು. ಆದರೆ ಇವೆರಡರಲ್ಲಿ ಕುಟುಂಬಕ್ಕಷ್ಟೇ ಅಧಿಕಾರ. ಕಾಂಗ್ರೆಸ್ನಲ್ಲಿ ಸೋನಿಯಾ ಗಾಂಧಿ ಕಂಪನಿ, ರಾಹುಲ್ ಗಾಂಧಿ ಕಂಪನಿ, ಪ್ರಿಯಾಂಕಾ ಗಾಂಧಿ ಕಂಪನಿ ಇರುವುದು. ರಾಮನಗರದಲ್ಲಿ ಕುಮಾರಸ್ವಾಮಿ ಕಂಪನಿ ಇದೆ. ಈ ಸಮಾಜದಲ್ಲಿ ಯಾವುದಾದರೂ ಅರ್ಥ ಇಲ್ಲದೆ ಇರೋ ಪಕ್ಷಗಳು ಅಂದರೆ ಅದು ಇವುಗಳೇ. ಬರುವ ಚುನಾವಣೆಯಲ್ಲಿ ರಾಮನಗರದಲ್ಲಿ ನಾವು ಮೆಜಾರಿಟಿ ತೆಗೆದುಕೊಳ್ತೇವೆ. ಅಲ್ಲಿ ಎಲ್ಲಾ ತರ ಇದ್ದಾರೆ, ಬಂಡೆ ಜೊತೆ ಕುಮಾರಸ್ವಾಮಿನೂ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಅಧಿವೇಶನ ಕರೆಯಲು ಸರ್ಕಾರ ಹಿಂದೇಟು ಹಾಕುವ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಎಲ್ಲಿದ್ಯಪ್ಪಾ ಕುಮಾರಸ್ವಾಮಿ?. ಅಧಿವೇಶನ ಇದ್ದಾಗಲೇ ಅವರು ಸದನಕ್ಕೆ ಬರೋದಿಲ್ಲ. ಎಲ್ಲಿದ್ಯಪ್ಪ ಕುಮಾರಸ್ವಾಮಿ ಅಂತಾ ಅವರನ್ನು ಹುಡುಕಬೇಕು. ಸದನ ಕರೀರಿ ಅನ್ನೋದು, ಆಮೇಲೆ ಬರದೆ ಇರೋದು. ಸಿದ್ದರಾಮಯ್ಯ ಮಾತಿನಂತೆ ಇವರೂ ಮಾತಾಡ್ತಿರೋದು. ಬಾಯಿಗೆ ಬಂದಂತೆ, ದಿಕ್ಕು ಇಲ್ಲದಂತೆ ಗುಂಡು ಹೊಡೆಯುತ್ತಿದ್ದಾರೆ ಎಂದು ಟೀಕಿಸಿದರು.