ಬೆಂಗಳೂರು:75 ವರ್ಷ ದಾಟಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತುತ ನಾಯಕರಲ್ಲ. ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿ ಪಕ್ಷದ ಮಾರ್ಗದರ್ಶಕರಾಗಿರಬೇಕು ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಭ್ರಷ್ಟಾಚಾರದ ಕೂಪಮಂಡಲ್ಲಿರುವ ಪಕ್ಷದ ನಾಯಕ. ಭ್ರಷ್ಟಾಚಾರದಲ್ಲಿ ತೊಡಗಿರುವ ನಾಯಕರು ಅವರಾಗಿದ್ದು, ಅವರ ಸಾಧನೆಗಳು ಇಡೀ ಜಗತ್ತಿಗೆೆ ಗೊತ್ತಿದೆ. ಸಿದ್ದರಾಮಯ್ಯ ವಯಸ್ಸು ನಿವೃತ್ತಿ ದಾಟಿದೆ. ಅವರು ಈ ಕಾಲಕ್ಕೆ ಪ್ರಸ್ತುತವಲ್ಲ. ಅವರು ಪಕ್ಷಕ್ಕೆ ಮಾರ್ಗದರ್ಶಕರಾಗಿರಬೇಕು. ನಾನು ಇನ್ನೂ ಕಣದಲ್ಲಿದ್ದೇನೆ ಎನ್ನುವ ಮೂಲಕ ಸ್ವಾರ್ಥಿಯಾಗಬಾರದು. ಬೇರೆಯವರಿಗೂ ಅವಕಾಶ ಮಾಡಿಕೊಡಬೇಕು. ಆದರೆ ಅಂಥ ಯಾವ ಗುಣವೂ ಸಿದ್ದರಾಮಯ್ಯ ಅವರಿಗೆ ಇಲ್ಲ. ಕೇವಲ ನಾನು, ನಾನು, ನಾನು ಎನ್ನುವುದಷ್ಟೇ ಅವರಲ್ಲಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜನಪರ ಕೆಲಸಕ್ಕೆ ಜನರ ಬೆಂಬಲ: ದೇಶದ ಅನೇಕ ಕಡೆ ಬಿಜೆಪಿ ಮರಳಿ ಅಧಿಕಾರಕ್ಕೆ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ನಮ್ಮ ಪಕ್ಷದ ಮೇಲೆ ಜನರು ವಿಶ್ವಾಸವಿಡುತ್ತಿದ್ದಾರೆ. ಜನಪರ ಕೆಲಸ ಆಗುತ್ತಿರುವುದಕ್ಕೆ ಜನ ಬೆಂಬಲಿಸುತ್ತಿದ್ದಾರೆ. ಗುಜರಾತ್ನ ಜಯಭೇರಿಯೇ ಇದಕ್ಕೆ ದೊಡ್ಡ ಸಂದೇಶವಾಗಿದೆ ಎಂದರು.