ಬೆಂಗಳೂರು :ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ಸಾಲಿನಿಂದಲೇ ಅನುಷ್ಠಾನಗೊಳಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತಯಾರಿ ಮಾಡಿಕೊಂಡಿದೆ. ಐಐಟಿ ಮತ್ತು ಎನ್ಐಟಿಗೆ ಸರಿಸಮಾನವಾದ ಎಂಜಿನಿಯರಿಂಗ್ ಕೋರ್ಸ್ಗಳನ್ನು ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಪಠ್ಯಕ್ರಮಕ್ಕೆ ಸರಿ ಹೊಂದುವ ಬಿಎಸ್ಸಿ ಕೋರ್ಸ್ಗಳನ್ನು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಎನ್ಇಪಿ ಅನುಷ್ಠಾನಕ್ಕಾಗಿ ಮಾಡಿಕೊಂಡಿರುವ ಸಿದ್ಧತೆ ಕುರಿತು ಇಂದು ವರ್ಚುವಲ್ ಸಭೆಯಲ್ಲಿ ಸಚಿವರು ಈ ಸಲಹೆಗಳನ್ನು ನೀಡಿದರು. ಅವುಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ವಿಟಿಯು ಕುಲಪತಿ ಪ್ರೊ.ಕರಿಸಿದ್ಧಪ್ಪ ಅವರು ಸಭೆಗೆ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದ ಮೇಲೆ ಎಂಜಿನಿಯರಿಂಗ್ ಆವಿಷ್ಕಾರಗಳು ಹೆಚ್ಚಿನ ಪ್ರಭಾವ ಬೀರುತ್ತಿವೆ. ಇದನ್ನು ಗಮನಿಸಿ, ‘ಬಯಾಲಜಿ ಫಾರ್ ಇಂಜಿನಿಯರ್ಸ್’ ಎಂಬ ಕೋರ್ಸ್ ಅನ್ನು 4ನೇ ಸೆಮಿಸ್ಟರ್‌ನಲ್ಲಿ ಅಳವಡಿಸುವುದು ಸೂಕ್ತ. ಸುಸ್ಥಿರ ಪರಿಸರದ ಬಗ್ಗೆ ಒತ್ತು ನೀಡುವುದಕ್ಕಾಗಿ ‘ಎನ್ವಿರಾನ್ಮೆಂಟಲ್ ಸ್ಟಡೀಸ್’ ಅನ್ನು ಸೇರಿಸಬೇಕು.
ಪಠ್ಯಕ್ರಮ ಮತ್ತು ಪ್ರಾಯೋಗಿಕ ಕಲಿಕೆ ಎರಡಕ್ಕೂ ಸಮಾನ ಪ್ರಾಮುಖ್ಯ ಕೊಡಬೇಕು. ಹಾಗೆಯೇ, ಸಂಗೀತದ ಬಗ್ಗೆ ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿ ‘ಮ್ಯೂಸಿಕ್ ಅಂಡ್ ಮೆಕ್ಯಾನಿಕಲ್ ವೈಬ್ರೇಷನ್ಸ್’ ಎಂಬ ವಿಷಯ ಸೇರಿಸಬೇಕು ಎಂದು ಸಚಿವರೊಂದಿಗಿನ ಸಭೆಯಲ್ಲಿ ನಿರ್ಧರಿಸಲಾಯಿತು.