ಬೆಂಗಳೂರು: ಜಾಗತಿಕ ಪ್ರತಿಷ್ಠೆಯ ಬೆಂಗಳೂರು ತಂತ್ರಜ್ಞಾನ ಸಮಾವೇಶದ (ಬಿಟಿಎಸ್) ರಜತೋತ್ಸವ ವರ್ಷದ ಶೃಂಗಸಭೆಯು ನ. 16, 17 ಮತ್ತು 18ರಂದು ಬೆಂಗಳೂರು ಅರಮನೆ ಆವರಣದಲ್ಲಿ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚುಯಲ್ ರೂಪದಲ್ಲಿ ಉದ್ಘಾಟಿಸಲಿದ್ದಾರೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ-ತಂತ್ರಜ್ಞಾನ ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, 'ಮುಂದಿನ ತಲೆಮಾರಿಗೆ ತಂತ್ರಜ್ಞಾನ' (Tech4NexGen) ಘೋಷವಾಕ್ಯದಡಿ ಸಮಾವೇಶವು ಈ ಬಾರಿ ಭೌತಿಕವಾಗಿ (ಆಫ್‌ಲೈನ್) ನಡೆಯಲಿದೆ. 20 ದೇಶಗಳ 350ಕ್ಕೂ ಹೆಚ್ಚು ಪರಿಣತರು ಭಾಗವಹಿಸುತ್ತಿದ್ದು, 5 ಸಾವಿರಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಳ್ಳುತ್ತಿದ್ದಾರೆ. ಇದರ ಜತೆಗೆ 575 ಪ್ರದರ್ಶಕರು, ನಾವೀನ್ಯತೆಯ ಶಕ್ತಿಯನ್ನು ತೋರಿಸಲು ಬೃಹತ್ ಸಂಖ್ಯೆಯ ನವೋದ್ಯಮಗಳು ಮತ್ತು ಯೂನಿಕಾರ್ನ್ ಕಂಪನಿಗಳು ಇರಲಿವೆ. ಮುಂದೆ ಈ ಸಮಾವೇಶವನ್ನು ದಾವೋಸ್ ಶೃಂಗಸಭೆಯಂತೆ ನಡೆಸಲಾಗುವುದು ಎಂದರು.
ರಾಜ್ಯ ಸರ್ಕಾರದ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಭಾರತೀಯ ಸಾಫ್ಟ್‌ವೇರ್ ತಂತ್ರಜ್ಞಾನ ಪಾರ್ಕ್‌ಗಳ (ಎಸ್‌ಟಿಪಿಐ) ಸಹಯೋಗದೊಂದಿಗೆ ಬಿಟಿಎಸ್-25ನ್ನು ಏರ್ಪಡಿಸುತ್ತಿದೆ. ಇದು ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಸಮಾವೇಶವಾಗಿದ್ದು, ಎಲೆಕ್ಟ್ರಾನಿಕ್ಸ್, ಡೀಪ್ ಟೆಕ್, ಬಯೋಟೆಕ್ ಮತ್ತು ಸ್ವಾರ್ಟಪ್‌ಗಳ ಮೇಲೆ ಗಮನ ಕೇಂದ್ರೀಕರಿಸಲಾಗುವುದು. ಬೆಳ್ಳಿ ಹಬ್ಬದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಣಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಯುಕ್ತ ಅರಬ್ ಸಂಸ್ಥಾನದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಖಾತೆಯ ಸಹಾಯಕ ಸಚಿವ ಒಮರ್ ಬಿನ್ ಸುಲ್ತಾನ್ ಅಲ್ ಒಲಾಮಾ, ಆಸ್ಟ್ರೇಲಿಯಾದ ವಿದೇಶಾಂಗ ಖಾತೆ ಸಹಾಯಕ ಸಚಿವ ಟಿಮ್ ವ್ಯಾಟ್ಸ್, ಫಿನ್ಲೆಂಡ್‌ನ ವಿಜ್ಞಾನ ಸಚಿವ ಪೆಟ್ರಿ ಹಾನ್ಕೊನೆನ್, ಭಾರತದ ಪ್ರಪ್ರಥಮ ಯೂನಿಕಾರ್ನ್ ಕಂಪನಿ 'ಇಮ್ಮೊಬಿ'ಯ ಸಂಸ್ಥಾಪಕ ನವೀನ್ ತೆವಾರಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ (ವರ್ಚುಯಲ್) ಮತ್ತು ಅಮೆರಿಕದ ಕೈಂಡ್ರೆಲ್ ಕಂಪನಿಯ ಸಿಇಒ ಮಾರ್ಟಿನ್ ಶ್ರೋಟರ್ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಡಿಜಿಟಲ್ ಆರ್ಥಿಕತೆಯ ಸಾಧನೆಗೆ ಇಂಬು:ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 25ಕ್ಕಿಂತ ಹೆಚ್ಚು ವರ್ಷದಿಂದ ಸಕ್ರಿಯವಾಗಿರುವ ಐಟಿಇ ವಲಯದ 35, ಎಸ್‌ಟಿಪಿಐ ವಲಯದ 10, ಬಿಟಿ ವಲಯದ 6 ಕಂಪನಿಗಳಿಗೆ ಮತ್ತು ಯೂನಿಕಾರ್ನ್ ದರ್ಜೆಯ 10 ನವೋದ್ಯಮಗಳಿಗೆ ಸನ್ಮಾನಿಸಲಾಗುವುದು. ಸಮಾವೇಶವು 300 ಶತಕೋಟಿ ಡಾಲರ್ ಮೌಲ್ಯದ ಡಿಜಿಟಲ್ ಆರ್ಥಿಕತೆಯ ಸಾಧನೆಗೆ ಇಂಬು ನೀಡಲಿದೆ ಎಂದು ಅವರು ನುಡಿದರು.