ಕರ್ನಾಟಕ

karnataka

ETV Bharat / state

ಮೆಕಾಲೆ ಪದ್ಧತಿಯಿಂದ ಹೊರಬಂದು ನಮ್ಮತನವಿರುವ ಶಿಕ್ಷಣ ಪದ್ಧತಿಗೆ ಒತ್ತು : ಸಚಿವ ಅಶ್ವತ್ಥ್​ ನಾರಾಯಣ್​ - ನೂತನ ರಾಷ್ಟ್ರೀಯ ಶಿಕ್ಷಣ ನೀತಿ

ರಾಜ್ಯವು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದ್ದು, ನಿರುದ್ಯೋಗ ನಿವಾರಣೆಗೆ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವತ್ಥ್​ ನಾರಾಯಣ್ ಅವರು ತಿಳಿಸಿದ್ದಾರೆ.

ಸಚಿವ ಅಶ್ವತ್ಥ್​ ನಾರಾಯಣ್​
ಸಚಿವ ಅಶ್ವತ್ಥ್​ ನಾರಾಯಣ್​

By

Published : Mar 5, 2023, 8:49 PM IST

ಬೆಂಗಳೂರು : ಭಾರತದ ಮೇಲೆ ದಾಳಿ ಮಾಡಿದ ವಿದೇಶಿ ಆಕ್ರಮಣಕಾರರು ನಮ್ಮ ಶಿಕ್ಷಣ ಪದ್ಧತಿಯನ್ನೇ ಸಂಪೂರ್ಣ ಹಾಳು ಮಾಡಿದರು. ನಾವೀಗ ಕೇವಲ ಗುಮಾಸ್ತರನ್ನು ಸೃಷ್ಟಿಸುವಂತಹ ಮೆಕಾಲೆ ಪ್ರಣೀತ ಶಿಕ್ಷಣ ಪದ್ಧತಿಯಿಂದ ನಿಧಾನವಾಗಿ ಹೊರಬರುತ್ತಿದ್ದು, ದೇಶದ ಅಗತ್ಯಗಳಿಗೆ ತಕ್ಕ ಶೈಕ್ಷಣಿಕ ಕ್ರಮವನ್ನು ರೂಪಿಸುತ್ತಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ್​ ನಾರಾಯಣ್ ಅವರು ಹೇಳಿದ್ದಾರೆ.

'ಅಂಡರ್ 25' ಸಂಸ್ಥೆಯು ಏರ್ಪಡಿಸಿದ್ದ ಯುವ ಸಮಾವೇಶದಲ್ಲಿನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ವಿವಿಧ ಭಾಗಗಳ 25 ವರ್ಷದೊಳಗಿನ ಯುವಕರು ಎರಡು ದಿನಗಳ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶವು ಅಮೃತ ಕಾಲದಲ್ಲಿ ಮುನ್ನಡೆಯುತ್ತಿದೆ. ಸ್ವಾವಲಂಬನೆ ಮತ್ತು ಉದ್ಯೋಗ ಗಳಿಕೆ ಎರಡನ್ನೂ ಸಾಧ್ಯವಾಗಿಸುವಂತಹ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದೊಂದಿಗೆ ನಮ್ಮ ಸ್ವಾತಂತ್ರವು ಪರಿಪೂರ್ಣವಾಗಲಿದೆ. ಜೊತೆಗೆ, ದೇಶದ ಯುವಜನರಲ್ಲಿ ಸಮರ್ಥ ನಾಯಕತ್ವ ಸೃಷ್ಟಿಯಾಗಲಿದೆ ಎಂದು ಅವರು ಆಶಿಸಿದರು.

ಇದನ್ನೂ ಓದಿ :ಕಾರ್ಮಿಕರಿಗೆ ಸೂರು.. ರಾಜ್ಯದಲ್ಲಿ ಶ್ರಮಿಕ್ ನಿವಾಸ್ ಯೋಜನೆ ಶೀಘ್ರದಲ್ಲೇ ಲೋಕಾರ್ಪಣೆ

ಪ್ರತಿಯೊಬ್ಬ ವಿದ್ಯಾರ್ಥಿಗೂ ಕೌಶಲ್ಯಭಿವೃದ್ಧಿ ತರಭೇತಿ ಕಡ್ಡಾಯ: ಕರ್ನಾಟಕವು ಸ್ಟಾರ್ಟಪ್‌, ಎಂಜಿನಿಯರಿಂಗ್, ಸೆಮಿಕಂಡಕ್ಟರ್, ಐಟಿ, ಬಿಟಿ, ಸಂಶೋಧನೆ, ಕೈಗಾರಿಕಾ ಬೆಳವಣಿಗೆಗಳಲ್ಲಿ ಅಗ್ರಸ್ಥಾನದಲ್ಲಿದೆ. ರಾಜ್ಯವು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ನಿರುದ್ಯೋಗ ನಿವಾರಣೆಗೆ ರಚನಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ರಾಜ್ಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಕಡ್ಡಾಯಗೊಳಿಸಿದ್ದು, ಸರ್ಕಾರದ ವತಿಯಿಂದ ಉಚಿತವಾಗಿ ಕೊಡಲಾಗುತ್ತಿದೆ ಎಂದು ಅವರು ತಿಳಿಸಿದರು.

ನಾಯಕತ್ವವು ನಿರ್ವಾತದಲ್ಲಿ ಸೃಷ್ಟಿಯಾಗುವುದಿಲ್ಲ. ಅದಕ್ಕೆ ತಕ್ಕ ಕಾರ್ಯ ಪರಿಸರ ಮತ್ತು ಹೊಣೆಗಾರಿಕೆಯನ್ನು ತಮ್ಮದೆಂದು ಭಾವಿಸುವ ಮನೋಭಾವ ಅತ್ಯಗತ್ಯವಾಗಿ ಬೇಕಾಗುತ್ತವೆ. ರಾಜ್ಯದ ಉನ್ನತ ಶಿಕ್ಷಣ ಕ್ರಮದಲ್ಲಿ ಇಂತಹ ಅಂಶಗಳನ್ನು ಪರಿಗಣಿಸಲಾಗಿದೆ. ಇಲ್ಲಿ ಎಲ್ಲರೂ ದೈಹಿಕ, ಮಾನಸಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತಿತರ ಜವಾಬ್ದಾರಿಗಳನ್ನು ನಿರ್ವಹಿಸುವಂತಹ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು ನುಡಿದರು.

ಇದನ್ನೂ ಓದಿ :ರಾಜ್ಯಕ್ಕೆ ಅಗೌರವ ತರುವ ಕೆಲಸ ಬಿಜೆಪಿ ಮಾಡಿದೆ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಅಗಾಧ ಪ್ರಮಾಣದ ಬಂಡವಾಳ ಹರಿದು ಬರುತ್ತಿದೆ:ರಾಜ್ಯದಲ್ಲಿ ಜಾಗತಿಕ ಮಟ್ಟದ ನೂರಾರು ಕಂಪನಿಗಳಿದ್ದು, ಉದ್ಯೋಗಾವಕಾಶಕ್ಕೇನೂ ಕೊರತೆ ಇಲ್ಲ. ಇನ್ನೊಂದೆಡೆಯಲ್ಲಿ ನಮ್ಮಲ್ಲಿಗೆ ಅಗಾಧ ಪ್ರಮಾಣದ ಬಂಡವಾಳ ಕೂಡ ಹರಿದು ಬರುತ್ತಿದೆ. ಇವುಗಳನ್ನು ನಮ್ಮ ಯುವಜನರ ಭವಿಷ್ಯಕ್ಕೆ ಪೂರಕವಾಗಿ ಬಳಸಿಕೊಳ್ಳಲು ನಾವು ಬಯಸಿದ್ದೇವೆ. ಏಕೆಂದರೆ, ಪ್ರತಿಯೊಬ್ಬರಿಗೂ ಉದ್ಯೋಗವನ್ನು ದೊರಕಿಸಿ ಕೊಡುವುದು ಸಮಾಜದ ಆರ್ಥಿಕ ಮತ್ತು ಇನ್ನಿತರ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ಅಂಡರ್‌ 25 ಸಂಸ್ಥೆಯ ಸಹಸಂಸ್ಥಾಪಕ ಶ್ರೇಯಾಂಶ್ ಜೈನ್‌ ಉಪಸ್ಥಿತರಿದ್ದರು.

ಇದನ್ನೂ ಓದಿ :ಹೆಚ್ 3 ಎನ್ 2 ಪ್ರಭೇದ ಪತ್ತೆ, ಕ್ರಮಗಳ ಕುರಿತು ಅಧಿಕಾರಿಗಳು, ತಜ್ಞರ ಸಭೆ : ಸಚಿವ ಡಾ ಕೆ ಸುಧಾಕರ್

ABOUT THE AUTHOR

...view details