ಬೆಂಗಳೂರು: ವಿವೇಕಾನಂದರು ಆಸೆಪಟ್ಟಿದ್ದಂತಹ ಸಶಕ್ತ ಭಾರತವನ್ನು ಕಟ್ಟುವ ಮಹೋದ್ದೇಶದಿಂದಲೇ 34 ವರ್ಷಗಳ ನಂತರ ದೇಶದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು(ಎನ್‌ಇಪಿ) ಜಾರಿಗೆ ತರಲಾಗಿದೆ. ಇದರ ಅನುಷ್ಠಾನದಲ್ಲಿ ರಾಜ್ಯವು ಇಡೀ ದೇಶಕ್ಕೇ ಮೊದಲ ಸ್ಥಾನದಲ್ಲಿದ್ದು, ಯುವಜನರ ಸಬಲೀಕರಣವನ್ನು ಸಮರೋಪಾದಿಯಲ್ಲಿ ಮಾಡುತ್ತಿದೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿದರು.
'ಸಮರ್ಥ ಭಾರತ’ ಸಂಘಟನೆಯು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 159ನೇ ಜಯಂತಿಯಲ್ಲಿ ಅವರು ಮಾತನಾಡಿದರು.
ವಿವೇಕಾನಂದರು ಇಡೀ ಪ್ರಪಂಚಕ್ಕೆ ಭಾರತ ಮತ್ತು ಭಾರತೀಯತೆಯನ್ನು ಪರಿಚಯಿಸಿದರು. ಅವರಿಂದ ಪ್ರಭಾವಿತರಾಗಿರುವ ಪ್ರಧಾನಿ ಮೋದಿ ಈಗ ಎನ್ಇಪಿ ಮೂಲಕ ಆತ್ಮನಿರ್ಭರವನ್ನು ಕಟ್ಟಲು ದಾಪುಗಾಲಿಡುತ್ತಿದ್ದಾರೆ ಎಂದರು.
ಈ ಆಶಯಗಳಿಗೆ ತಕ್ಕಂತೆ ರಾಜ್ಯದಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಈಗಾಗಲೇ ಉನ್ನತ ಶಿಕ್ಷಣದಲ್ಲಿ ಬಹುತೇಕ ಈ ಕಾರ್ಯ ಪೂರ್ಣಗೊಂಡಿದ್ದು, ಇನ್ನು ಒಂದು ವರ್ಷದಲ್ಲಿ ಶೇ.100ರಷ್ಟು ಡಿಜಿಟಲೀಕರಣ ಆಗಲಿದೆ. ಈ ಮೂಲಕ ಸಮಾಜದ ಸಬಲೀಕರಣ ಮತ್ತು ಸಮಾನತೆ ಎರಡನ್ನೂ ಸಾಧಿಸಲಿದ್ದೇವೆ ಎಂದು ಅವರು ಪ್ರತಿಪಾದಿಸಿದರು.