ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ (ಬಿಟಿಎಸ್) 25ನೇ ವರ್ಷದ ಸಮಾವೇಶವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಜಾಗತಿಕ ನಾವೀನ್ಯತಾ ಸಹಭಾಗಿ (ಜಿಐಎ) ರಾಷ್ಟ್ರಗಳ ಕಾನ್ಸುಲ್ ಜನರಲ್, ಡೆಪ್ಯುಟಿ ಕಾನ್ಸುಲ್ ಜನರಲ್ ಮತ್ತು ಗೌರವ ಕಾನ್ಸುಲ್ ಜನರಲ್‌ಗಳೊಂದಿಗೆ ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಬುಧವಾರ ಸಮಾಲೋಚನೆ ನಡೆಸಿದರು.
ಬಿಟಿಎಸ್-25ರ ಭಾಗವಾಗಿರುವ ಜಾಗತಿಕ ನಾವೀನ್ಯತಾ ಸಹಭಾಗಿ (ಜಿಐಎ) ದೇಶಗಳನ್ನು ಆಹ್ವಾನಿಸಲು ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟಿಎಸ್-25 ಸಮಾವೇಶದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದರು.
ರಾಜ್ಯವು ಈಗಾಗಲೇ 30ಕ್ಕೂ ಹೆಚ್ಚು ಜಿಐಎ ಸಹಭಾಗಿಗಳನ್ನು ಹೊಂದಿದ್ದು, 50ಕ್ಕೂ ಹೆಚ್ಚು ಮಹತ್ವದ ಯೋಜನೆಗಳು ಪ್ರಗತಿಯಲ್ಲಿವೆ. ಮುಖ್ಯವಾಗಿ ಅಗ್ರಿಟೆಕ್, ಫಿನ್ಟೆಕ್, ಮೆಡ್-ಟೆಕ್, ಕೃತಕ ಬುದ್ಧಿಮತ್ತೆ, ಮಶೀನ್ ಲರ್ನಿಂಗ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಕ್ಷೇತ್ರಗಳಲ್ಲಿ ನಾವೀನ್ಯತಾ ಸಹಭಾಗಿತ್ವದ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ.
25ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಸಮಾವೇಶವು ಟೆಕ್ 4 ನೆಕ್ಸ್-ಜೆನ್ ಘೋಷವಾಕ್ಯದೊಂದಿಗೆ ನ. 16, 17 ಮತ್ತು 18ರಂದು ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, 48ಕ್ಕೂ ಹೆಚ್ಚು ದೇಶಗಳು ಪಾಲ್ಗೊಳ್ಳಲಿವೆ.ಬೆಂಗಳೂರಿನಲ್ಲಿ ಈಗಾಗಲೇ 40 ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಇವೆ. ಇನ್ನೂ ಹೆಚ್ಚಿನ ಕಂಪನಿಗಳ ಇಂತಹ ಕೇಂದ್ರಗಳು ಇಲ್ಲಿ ಆರಂಭಗೊಳ್ಳಬೇಕು. ಇದಕ್ಕೆ ಪೂರಕವಾಗಿ ರಾಜ್ಯವು ಸ್ಟಾರ್ಟ್ ಅಪ್ ಕರ್ನಾಟಕ, ಇನ್ನೊವೇಟ್ ಕರ್ನಾಟಕ ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಶನ್ ತರಹದ ಉಪಕ್ರಮಗಳನ್ನು ಕೈಗೊಂಡಿದೆ.
ಅಭಿವೃದ್ಧಿ ವಿಚಾರದಲ್ಲಿ ಸುಸ್ಥಿರತೆ ಮರೆಯಬಾರದು: ಅಭಿವೃದ್ಧಿ ವಿಚಾರದಲ್ಲಿ ಸುಸ್ಥಿರತೆ, ಕೈಗೆಟುಕುವಿಕೆ, ಪರಿಸರಸ್ನೇಹಿ ತಂತ್ರಜ್ಞಾನ ಮತ್ತು ಮಾಲಿನ್ಯರಹಿತತೆ ಇವುಗಳನ್ನು ಮರೆಯಬಾರದು.