ಬೆಂಗಳೂರು :ಭ್ರಷ್ಟಾಚಾರದಿಂದ ತುಂಬಿರುವ ಮತ್ತು ಭ್ರಷ್ಟಾಚಾರಕ್ಕೆ ಹೆಸರುವಾಸಿಯಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹಳ ದೊಡ್ಡ ಹೇಳಿಕೆ ಕೊಟ್ಟಿದ್ದಾರೆ. ಜೈಲಿಗೆ ಹೋಗಿ ಬಂದ ವ್ಯಕ್ತಿ. ಅವರಿಗೆ ನೈತಿಕತೆ ಅನ್ನುವುದೇ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ತಿರುಗೇಟು ನೀಡಿದ್ದಾರೆ.
ಅಶ್ವತ್ಥ್ ನಾರಾಯಣ ಅತ್ಯಂತ ಭ್ರಷ್ಟ ಸಚಿವ ಎಂಬ ಡಿ ಕೆ ಶಿವಕುಮಾರ್ ಹೇಳಿಕೆಗೆ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ದಾಖಲೆ ಇಲ್ಲದೆ ಮಾತನಾಡಿದ್ದಾರೆ. ಜೈಲಿಗೆ ಹೋಗಿ ಬಂದ ವ್ಯಕ್ತಿ ನನ್ನ ಬಗ್ಗೆ ಮಾತನಾಡಿದ್ದಾರೆ. ಇಂತಹ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ ಎಂದರು.
ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಹೀಗಾಗಿ, ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಈ ವ್ಯಕ್ತಿಯ ಆರೋಪಕ್ಕೆ ಯಾವುದೇ ಕಿಮ್ಮತ್ತಿಲ್ಲ. ದಾಖಲೆ ಇದ್ದರೆ ಮುಂದೆ ಬನ್ನಿ. ಸಿಐಡಿ ತನಿಖೆ ನಡೆಯುತ್ತಿದೆ. ತನಿಖೆ ವೇಳೆ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ಧಾರೆ. ಅಭ್ಯರ್ಥಿ ದರ್ಶನ್ ಗೌಡ ಸಂಬಂಧಿ ಅಂತಾರೆ. ಶಿವಕುಮಾರ್ ಬೇರೆ-ಬೇರೆ ಪಕ್ಷದ ಕಡೆ ಬೆರಳು ತೋರಿಸುತ್ತಿದ್ದಾರೆ ಎಂದು ಟೀಕಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ. ಜೈಲಿಗೆ ಹೋಗಿ ಬಂದ ಡಿಕೆಶಿ ಪರವಾಗಿ ಹೇಳಿಕೆ ಕೊಡುತ್ತಿದ್ಧಾರೆ. ಜೈಲಿಗೆ ಬಂದವರ ವಿರುದ್ಧ ಸಿದ್ದರಾಮಯ್ಯ ಎಂದಾದರೂ ಧ್ವನಿ ಎತ್ತಿದ್ದಾರಾ ಎಂದ ಅವರು, ತಪ್ಪಾಗಿರುವುದನ್ನು ನಮ್ಮಸರ್ಕಾರ ಹೊರತಂದಿದೆ. ಇದರ ಬಗ್ಗೆ ತನಿಖೆಗೆ ಕಾಂಗ್ರೆಸ್ನವರು ವಹಿಸಿದ್ದಾರಾ?. ನಮ್ಮ ಸಚಿವರು ಗಮನಕ್ಕೆ ಬಂದ ಕೂಡಲೇ ಈ ತನಿಖೆ ಮಾಡಿಸಿದ್ದಾರೆ. ನಮ್ಮ ಉನ್ನತ ಶಿಕ್ಷಣ ಇಲಾಖೆಯ ಬಗ್ಗೆಯೂ ದೂರು ಬಂದಿದೆ. ಅದರ ಬಗ್ಗೆಯೂ ತಕ್ಷಣವೇ ತನಿಖೆಗೆ ಕೊಡಲಾಗಿದೆ ಎಂದರು.
ಗೌಡರು ನನ್ನ ಸಂಬಂಧಿಕರು :ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಕೇಳಿ ಬಂದ ದರ್ಶನ್ ಗೌಡ, ನಾಗೇಶ್ ಗೌಡ ನಿಮ್ಮ ಸಂಬಂಧಿಗಳೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿರುವ ಎಲ್ಲ ಗೌಡರು ನನ್ನ ಸಂಬಂಧಿಕರೇ. ಯಾರೇ ಇರಲಿ ಎಲ್ಲರೂ ನನ್ನ ಸಂಬಂಧಿಗಳೇ. ಇಲ್ಲಿ ಅವರು ಬೇರೆ, ಇವರು ಬೇರೆ ಇಲ್ಲ. ಗೌಡರು ಯಾರಿದ್ದಾರೆ ಎಲ್ಲರೂ ನಮ್ಮವರೇ ಎನ್ನುವ ಪರೋಕ್ಷವಾಗಿ ನಮ್ಮವರೇ ಎಂದು ಸಚಿವರು ಒಪ್ಪಿಕೊಂಡರು.
ಇದನ್ನೂ ಓದಿ:ಅಕ್ರಮ ನೇಮಕಾತಿಗೆ ಸರ್ಕಾರ ಅಂಗಡಿ ತೆರೆದಿದೆ: ಅಶ್ವತ್ಥ ನಾರಾಯಣ್ ಅತ್ಯಂತ ಭ್ರಷ್ಟ ಸಚಿವ ಎಂದ ಡಿಕೆಶಿ