ಬೆಂಗಳೂರು:ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರನ್ನು ಬೆಸೆಯುವ ಸ್ಕಿಲ್ ಕನೆಕ್ಟ್ ಪೋರ್ಟಲ್ ಉದ್ಘಾಟನೆ, ಐದು ಸಂಸ್ಥೆಗಳೊಂದಿಗೆ ಉದ್ಯೋಗಸೃಷ್ಟಿಯ ಒಡಂಬಡಿಕೆ ಮತ್ತು ತಮ್ಮ ಇಲಾಖೆಗಳಲ್ಲಿ ಏನೆಲ್ಲ ಸುಧಾರಣೆಗಳನ್ನು ಮಾಡಲಾಗುತ್ತದೆ ಎಂಬುದರ ಸಂಕಲ್ಪ ಪತ್ರಗಳ ಬಿಡುಗಡೆಯೊಂದಿಗೆ ತಮ್ಮ ನೇತೃತ್ವದ ಎಲ್ಲ ಇಲಾಖೆಗಳಡಿಯಲ್ಲಿ ಡಿಸೆಂಬರ್ ಪೂರ್ತಿ ನಡೆಯುವ 'ಸುಶಾಸನ ಮಾಸಾಚರಣೆ'ಗೆ ಸಚಿವ ಡಾ ಸಿ ಎನ್ ಅಶ್ವತ್ಥ್ ನಾರಾಯಣ್ ಅವರು ಚಾಲನೆ ನೀಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಗಳ ವ್ಯಾಪ್ತಿಯಲ್ಲಿ ದಿವಂಗತ ಮಾಜಿ ಪ್ರಧಾನಿ ವಾಜಪೇಯಿಯವರ ಜನ್ಮದಿನದ ಅಂಗವಾಗಿ ಈ ಸುಶಾಸನ ಉಪಕ್ರಮವನ್ನು ವ್ಯಾಪಕ ಸ್ವರೂಪದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರ ಆರಂಭಕ್ಕಾಗಿ ವಿಧಾನಸೌಧದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವತ್ಥನಾರಾಯಣ ಅವರು, ಸುಶಾಸನ ಎನ್ನುವುದು ಹೊಸ ರಾಜಕೀಯ ಸಂಸ್ಕೃತಿಯಾಗಿದೆ. ಇದು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು. ಇದು ಸಾರ್ವಜನಿಕ ಸೇವೆಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನವಾಗಿದೆ. ಇದರಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಒತ್ತು ಕೊಡಲಾಗಿದೆ ಎಂದರು.
ಸುಶಾಸನ ಬರಬೇಕೆಂದರೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದೆ. ಹೀಗಾಗಿ, ಎನ್ಇಪಿ ಅನುಷ್ಠಾನದ ಮೂಲಕ ಉನ್ನತ ಶಿಕ್ಷಣದಲ್ಲಿ ಸುಧಾರಣೆ ತರಲಾಗುತ್ತಿದೆ. ಇದರ ಜತೆಗೆ ಈಗ ಸುಶಾಸನವೂ ಸೇರಿಕೊಂಡಿದೆ. ಇದರ ಭಾಗವಾಗಿ ಡಿಗ್ರಿ ಕಾಲೇಜು, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರಣಿ ನೇರ ಸಂವಾದಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಇದಲ್ಲದೆ ವಿವಿಗಳಲ್ಲಿ ಆನ್ಲೈನ್ ಡಿಜಿಟಲ್ ಕಲಿಕೆ ಮತ್ತು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಇದರಂತೆ, 2023ರ ಮಾರ್ಚ್ ವೇಳೆಗೆ ಪ್ರತಿ ವಿ.ವಿ ಯಲ್ಲೂ ಕನಿಷ್ಠಪಕ್ಷ ಒಂದು ಡಿಗ್ರಿ ಕೋರ್ಸಾದರೂ ಆನ್ಲೈನ್ ರೂಪದಲ್ಲಿ ಆರಂಭವಾಗಲಿದೆ. ಹಾಗೆಯೇ, ಈ ತಿಂಗಳ ಕೊನೆಯ ವೇಳೆಗೆ ಪ್ರತಿ ವಿವಿಯೂ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಜತೆಗೆ 3 ತಿಂಗಳಲ್ಲಿ ಕನಿಷ್ಠ ಪಕ್ಷ 5 ಉದ್ಯಮ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಅವರು ವಿವರಿಸಿದರು.
ಕೌಶಲ್ಯ ಕಲಿಕೆಗೆ ಮತ್ತಷ್ಟು ಬಲ :ಆಧುನಿಕ ಜಗತ್ತಿನಲ್ಲಿ ಯುವಜನರಲ್ಲಿ ಕೌಶಲ್ಯ ಕಲಿಕೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಸ್ಕಿಲ್ ಕನೆಕ್ಟ್ ಪೋರ್ಟಲ್ಗೆ ಹೊಸ ರೂಪ ಕೊಡಲಾಗಿದೆ. ಇದರಿಂದ ಉದ್ಯೋಗಾಕಾಂಕ್ಷಿ ಮತ್ತು ಉದ್ಯೋಗದಾತರ ನಡುವೆ ಸಕ್ರಿಯ ಸಂಬಂಧ ಉಂಟಾಗಲಿದೆ. ಇನ್ನೊಂದೆಡೆಯಲ್ಲಿ, ಐಟಿಐ ಅಂಕಪಟ್ಟಿಗಳ ಡಿಜಿಟಲೀಕರಣ ಮತ್ತು ಅವುಗಳನ್ನು ರಾಷ್ಟ್ರೀಯ ಶೈಕ್ಷಣಿಕ ಕೋಠಿಗೆ ಅಪ್ಲೋಡ್ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಒಟ್ಟು 60 ಸಾವಿರ ಐಟಿಐ ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್ಟ್ ಕಂಪನಿಯ ವತಿಯಿಂದ ಉತ್ಕೃಷ್ಟ ತರಬೇತಿ ಕೊಡಿಸಲಾಗುವುದು ಎಂದು ತಿಳಿಸಿದರು.
ಇದರಡಿಯಲ್ಲಿ ಇಂಗ್ಲಿಷ್ ಕಲಿಕೆ ಲ್ಯಾಬ್ಗಳ ಸ್ಥಾಪನೆ, ಜಪಾನಿನಲ್ಲಿ ಉದ್ಯೋಗಾವಕಾಶ ದೊರಕಿಸಿಕೊಡಲು ಜಪಾನಿ ಭಾಷೆಯ ಕಲಿಕೆಗೆ ವ್ಯವಸ್ಥೆ, ಲೋಕೋಸ್ ತಂತ್ರಾಂಶದ ಮೂಲಕ ಸ್ವಸಹಾಯ ಸಂಘಗಳ ಮಾಹಿತಿ ಮತ್ತು ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ತರಲಾಗುವುದು. ಜತೆಗೆ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಮಿಗಿಲಾಗಿ 13,500 ಮಹಿಳಾ ಉದ್ಯಮಿಗಳಿಗೆ ಸಿ-ಡಾಕ್ ಮೂಲಕ ಪ್ರೇರಣಾ ಶಿಬಿರಗಳನ್ನು ಆಯೋಜಿಸಲಾಗುವುದು. ಒಟ್ಟಿನಲ್ಲಿ 10 ಸಾವಿರ ಜನರಿಗೆ ಏಕಕಾಲದಲ್ಲಿ ನೇಮಕಾತಿ ಪತ್ರಗಳನ್ನು ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.