ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೋಂ ಕ್ವಾರಂಟೈನ್ ಹಿನ್ನೆಲೆಯಲ್ಲಿ ಬೆಂಗಳೂರು ಕೋವಿಡ್ ಉಸ್ತುವಾರಿ ಹೊತ್ತಿರುವ ಕಂದಾಯ ಸಚಿವ ಆರ್.ಅಶೋಕ್ ಕ್ರಿಯಾಶೀಲರಾಗಿದ್ದು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿ.ವಿ.ರಾಮನ್ ನಗರ ಕೋವಿಡ್ ಆಸ್ಪತ್ರೆಗೆ ಸಚಿವ ಅಶೋಕ್ ಭೇಟಿ, ಪರಿಶೀಲನೆ - ಕೋವಿಡ್ ಆಸ್ಪತ್ರೆಗೆ ಸಚಿವ ಅಶೋಕ್ ಭೇಟಿ ಸುದ್ದಿ
ಇಂದು ಸಿ.ವಿ.ರಾಮನ್ ನಗರದಲ್ಲಿರುವ ಕೋವಿಡ್ ಆಸ್ಪತ್ರೆಗೆ ಎಸ್.ಆರ್.ವಿಶ್ವನಾಥ್, ಸಂಸದ ಪಿ.ಸಿ.ಮೋಹನ್, ಶಾಸಕ ರಘು ಜೊತೆಯಲ್ಲಿ ಸಚಿವ ಅಶೋಕ್ ಭೇಟಿ ನೀಡಿದರು. ಈ ವೇಳೆ, ಆಸ್ಪತ್ರೆಯಲ್ಲಿನ ವ್ಯವಸ್ಥೆ, ಕೋವಿಡ್ ರೋಗಿಗಳಿಗೆ ಊಟೋಪಚಾರ, ಬೆಡ್ ವ್ಯವಸ್ಥೆಯನ್ನು ಪರಿಶೀಲನೆ ಮಾಡಿದರು.
ಕೋವಿಡ್ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವಾ ಸರಿಯಾಗಿ ಸಿಗುತ್ತಿಲ್ಲ, ಸರಿಯಾದ ಊಟ ನೀಡುತ್ತಿಲ್ಲ, ಬೆಡ್‌ಗಳು ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ಕೊರೊನಾ ಸೋಂಕಿತರಿಗೆ ಕಲ್ಪಿಸಿರುವ ವ್ಯವಸ್ಥೆ, ವೈದ್ಯಕೀಯ ಸೇವೆ ಹಾಗು ಇತರ ವ್ಯವಸ್ಥೆಗಳ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ತಂಡದಿಂದ ಸಚಿವರು ಮಾಹಿತಿ ಪಡೆದುಕೊಂಡರು.
ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಯಾವುದೇ ಸಮಸ್ಯೆ ಆಗಬಾರದು, ವೈದ್ಯಕೀಯ ಸೇವೆ, ಊಟೋಪಚಾರ, ಬೆಡ್ ವ್ಯವಸ್ಥೆ ಎಲ್ಲವನ್ನೂ ಸರಿಯಾಗಿ ನಿರ್ವಹಿಸಬೇಕು. ಸಮಸ್ಯೆಗಳು ಕಂಡುಬಂದಲ್ಲಿ ಗಮನಕ್ಕೆ ತನ್ನಿ ಅವುಗಳನ್ನು ಸರಿಪಡಿಸಲಾಗುತ್ತದೆ ಎಂದು ಆಸ್ಪತ್ರೆ ಸಿಬ್ಬಂದಿಗೆ ಸಚಿವ ಅಶೋಕ್ ಸೂಚನೆ ನೀಡಿದರು.