ಬೆಂಗಳೂರು: ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ ಎಂದು ಕಾಂಗ್ರೆಸ್ ಅಧ್ಯಕ್ಷರು ಮೊನ್ನೆ ಪಾದಯಾತ್ರೆಯಲ್ಲಿ ಬೊಬ್ಬೆ ಹಾಕಿದ್ದನ್ನು ನೋಡಿದೆ. ಕಾಂಗ್ರೆಸ್‌ನವರು ದೇಶದ ಜನರನ್ನು ಸಂಕಷ್ಟಕ್ಕೆ ದೂಡಿದ್ದು ಅನ್ನೋದು ನಿಜವಾದ ಇತಿಹಾಸ. ಅದನ್ನು ಮತ್ತೊಮ್ಮೆ ಸಾಬೀತು ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕೊರೊನಾ 3ನೇ ಅಲೆ ತೀವ್ರವಾಗಿ ಹಬ್ಬುತ್ತಿದೆ. ಇಂತಹ ಸಮಯದಲ್ಲಿ ನಿಮ್ಮ ಪಾದಯಾತ್ರೆ ರಾಜ್ಯದಲ್ಲಿ ಮತ್ತು ವಿಶೇಷವಾಗಿ ಬೆಂಗಳೂರಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಬೆಂಗಳೂರಿನ ಜನಸಂಖ್ಯೆಯ ಸರಿ ಸುಮಾರು ಅರ್ಧದಷ್ಟು ಜನ ಶಾಲೆ ಕಾಲೇಜುಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇದ್ದಾರೆ. ಅವರ ಪ್ರಾಣದ ಜೊತೆ ಕಾಂಗ್ರೆಸ್ ನಾಯಕರು ಚೆಲ್ಲಾಟ ಆಡುತ್ತಿದ್ದಾರೆ.
ಬೆಂಗಳೂರು ನಗರಕ್ಕೆ ರಾಜ್ಯದ ಬೇರೆ ಬೇರೆ ನಗರದಿಂದ ಜಿಲ್ಲೆಗಳಿಂದ ಜನ ಬರುತ್ತಾರೆ. ಇಲ್ಲೇ ಜೀವನ ಕಟ್ಟಿಕೊಂಡಿದ್ದಾರೆ. ಬೇರೆ ಬೇರೆ ಕೆಲಸಕ್ಕೆ ಬಂದವರ ಮಕ್ಕಳು ಇಲ್ಲೇ ಶಾಲೆ-ಕಾಲೇಜು ಓದುತ್ತಿದ್ದಾರೆ. ಅಂತಹ ಸಾಮಾನ್ಯ ಕುಟುಂಬದ ಮಕ್ಕಳಿಗೆ ನಿಮ್ಮ ರಾಜಕೀಯ ಯಾತ್ರೆಯಿಂದ ತೊಂದರೆಯಾದರೆ ಅದರ ಜವಾಬ್ದಾರಿಯನ್ನು ಕಾಂಗ್ರೆಸ್ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರನ್ನು ಟೇಕನ್ ಫಾರ್ ಗ್ರಾಂಟೆಡ್ ಎನ್ನುವ ರೀತಿ ತೆಗೆದುಕೊಳ್ಳಬೇಡಿ. ನಗರದಲ್ಲಿ ಬಡವ, ಶ್ರೀಮಂತ, ಮಾಧ್ಯಮ ವರ್ಗ ಸೇರಿದಂತೆ ವಿದ್ಯಾರ್ಥಿಗಳು, ಹೊರ ರಾಜ್ಯದವರು ನೆಲೆಸಿದ್ದಾರೆ. ಬೆಂಗಳೂರಿಗೆ ಏನಾದರೇನು, ನಾವು ಪಾದಯಾತ್ರೆ ಮಾಡೇ ಮಾಡ್ತೇವೆ ಎನ್ನುವ ನಿಮ್ಮ ದುರ್ಬುದ್ದಿಯನ್ನು ಬಿಡಿ. ಸರ್ಕಾರದ ಆದೇಶ ಪಾಲನೆ ಮಾಡಿ. ಹೈಕೋರ್ಟ್ ಅಭಿಪ್ರಾಯವನ್ನು ಗೌರವಿಸಿ ಎಂದಿದ್ದಾರೆ.
ಅಂದು ತಬ್ಲಿಘಿಗಳ ಸಭೆಯಿಂದಾಗಿ ಇಡೀ ದೇಶಕ್ಕೆ ಕೊರೊನಾ ಅಂಟಿತು ಎನ್ನುವ ಆರೋಪ ಇನ್ನೂ ಹೋಗಿಲ್ಲ. ಈಗ ಕಾಂಗ್ರೆಸ್ ರಾಜಕೀಯ ಪಾದಯಾತ್ರೆಯಿಂದ ಇಡಿ ರಾಜ್ಯ, ಬೆಂಗಳೂರು ನಗರಕ್ಕೆ ಕೊರೊನಾ ಸೋಂಕು ಹಬ್ಬಿತು ಎನ್ನುವ ಆರೋಪ ಬರುವ ಮುನ್ನ ಎಚ್ಚೆತ್ತುಕೊಳ್ಳಿ. ಇದು ಕಾಂಗ್ರೆಸ್ ನಾಯಕರಿಗೆ ನನ್ನ ಮನವಿಯೂ ಹೌದು, ಆಗ್ರಹ ಹೌದು ಎಂದು ಹೇಳಿದ್ದಾರೆ.
ರಾಮನಗರ ಜಿಲ್ಲಾಡಳಿತ ನೀಡಿದ ನೋಟಿಸ್ಗೆ ಕಾಂಗ್ರೆಸ್ ನಾಯಕರು ಗೌರವ ನೀಡಲಿಲ್ಲ. ಆರೋಗ್ಯ ಅಧಿಕಾರಿಗಳು ಮಾಡಿದ ಮನವಿಗೆ ಸ್ಪಂದಿಸಲಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ನೀಡಿದ ಸೂಚನೆ ಪಾಲಿಸಲಿಲ್ಲ. ನಿಮ್ಮ ಇತಿಹಾಸ ಮೊದಲೇ ಕರಾಳವಾಗಿದೆ. ಆ ಇತಿಹಾಸ ಘೋರವಾಗುವ ಮುನ್ನ ಎಚ್ಚೆತ್ತುಕೊಳ್ಳಿ. ರಾಜ್ಯದ ಜನತೆಯ ಆರೋಗ್ಯದ ಮೇಲೆ ರಾಜಕೀಯ ಮಾಡಬೇಡಿ ಎಂದು ಮಾಧ್ಯಮ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ನಿಮ್ಮದೇ ಪಕ್ಷಗಳು ಅಧಿಕಾರದಲ್ಲಿ ಇರುವ ಪಂಜಾಬ್, ರಾಜಸ್ಥಾನ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿ ಬಿಗಿ ಕ್ರಮ ಈಗಾಗಲೇ ಕೈಗೊಂಡಿದ್ದಾರೆ. ನಿಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ಚುನಾವಣೆ ರ್ಯಾಲಿ ಬಂದ್ ಮಾಡಿದ್ದಾರೆ. ನಮ್ಮ ಸರ್ಕಾರ ಏನನ್ನೂ ಮಾಡಿಲ್ಲ ಅನ್ನುವವರು ಸರಿಯಾಗಿ ತಿಳಿದು ಮಾತನಾಡಬೇಕು. 2013 ರಿಂದ 2018ರ ಅವಧಿಯಲ್ಲಿ ಕಾವೇರಿ ಜಲ ವಿವಾದ ಇತ್ಯರ್ಥಗೊಂಡಿತ್ತು. ಆಗ ರಾಜ್ಯ ಕಾಂಗ್ರೆಸ್ ಸರ್ಕಾರ ಡಿಪಿಆರ್ ಸಿದ್ದಪಡಿಸಿ ಕೇಂದ್ರಕ್ಕೆ ಸಲ್ಲಿಸಿದರೆ ಸಾಕಿತ್ತು. ಯೋಜನೆ ಜಾರಿಯಾಗುತ್ತಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ಕೈ ಚೆಲ್ಲಿ ಕುಳಿತಿತ್ತು. ಈಗ ನಮ್ಮ ಸರ್ಕಾರವನ್ನು ದೂರುತ್ತಿದೆ.
ಮೇಕೆದಾಟು ಯೋಜನೆ ಕುಡಿಯುವ ನೀರಿಗಾಗಿ. ಇದರಿಂದ ತಮಿಳುನಾಡಿಗೆ ಯಾವುದೇ ತೊಂದರೆ ಇಲ್ಲ. ಹೀಗಾಗಿ, ಸುಪ್ರೀಂಕೋರ್ಟ್ನಲ್ಲಿ ದಾಖಲಿಸಿದ್ದ ದಾವೆ ವಾಪಾಸ್ ಪಡೆಯಿರಿ. ಯೋಜನೆಗೆ ಸಹಕರಿಸಿ ಎಂದು ತಮಿಳುನಾಡು ಸಿಎಂ ಸ್ಟ್ಯಾಲಿನ್ಗೆ ಪತ್ರ ಬರೆದು ಸಂಧಾನದ ಮೂಲಕವೂ ವಿವಾದ ಇತ್ಯರ್ಥದ ದಾರಿ ಹುಡುಕಿದ್ದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ. ಕಾಂಗ್ರೆಸ್ ಜೊತೆಗೆ ಡಿಎಂಕೆ ಸರ್ಕಾರ ಇದೆ. ಈಗಲಾದರೂ ಕಾಂಗ್ರೆಸ್ ನಾಯಕರು ಸ್ಟಾಲಿನ್ ಜೊತೆ ಮಾತುಕತೆ ನಡೆಸಿ ಕೇಸ್ ವಾಪಸ್ ತೆಗೆಸಲಿ ಎಂದು ಆಗ್ರಹಿಸಿದ್ದಾರೆ.
ಮೇಕೆದಾಟು ಪ್ರಕರಣ ಈಗ ಸುಪ್ರೀಂಕೋರ್ಟ್ನಲ್ಲಿ ವಿಚಾರಣಾ ಹಂತದಲ್ಲಿದೆ. ತಮಿಳುನಾಡು ಸಿಎಂ ಸ್ಟ್ಯಾಲಿನ್ ದಾಖಲಿಸಿದ ದಾವೆಯೂ ಸೇರಿ ಎಲ್ಲವನ್ನೂ ಒಟ್ಟಿಗೆ ಇದೇ ತಿಂಗಳು 27 ಕ್ಕೆ ವಿಚಾರಣೆ ನಡೆಸುತ್ತೇನೆಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟವಾಗಿ ಉಭಯ ರಾಜ್ಯ ಹಾಗೂ ಕೇಂದ್ರಕ್ಕೆ ತಿಳಿಸಿದೆ. ಮತ್ತೆ ಪಾದಯಾತ್ರೆ ಎನ್ನುವ ನಾಟಕ ಬೇಕಿತ್ತೇ ಎಂದು ಪ್ರಶ್ನಿಸಿದ್ದಾರೆ.
ಜಲ ವಿವಾದ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವಾಗ ನಡೆಸುವ ಹೋರಾಟ ರಾಜ್ಯಕ್ಕೆ ಮಾರಕವಾಗಬಹುದು. ಕರ್ನಾಟಕದ ಒಪ್ಪಿತ ನಿಲುವಿಗೆ ವ್ಯತಿರಿಕ್ತವಾದ ನ್ಯಾಯಾಲಯಕ್ಕೆ ಹೊರತಾದ ಹೋರಾಟ ಸದಾ ಅಪಾಯಕಾರಿ. ಹಾಗಾಗಿ, ಬೆಂಗಳೂರನ್ನು ದಯವಿಟ್ಟು ನರಕ ಮಾಡಬೇಡಿ ಎಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಮೇಕೆದಾಟು ಪಾದಯಾತ್ರೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ