ಬೆಂಗಳೂರು: ಭೂಮಿ ಖರೀದಿಸಿ ಭೂ ಪರಿವರ್ತನೆಗಾಗಿ ಅಲೆದಾಡುತ್ತಿದ್ದವರಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಲು ನಿರ್ಧರಿಸಿದ್ದು, ಒಂದೇ ದಿನದಲ್ಲಿ ಭೂ ಪರಿವರ್ತನೆ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಈ ವಿಷಯ ಪ್ರಕಟಿಸಿದ್ದರು.
ಭೂಮಿ ಖರೀದಿಸಿದವರು ಅದರ ಪರಿವರ್ತನೆಗಾಗಿ ಆರು ತಿಂಗಳ ಸಮಯಾವಕಾಶ ತೆಗೆದುಕೊಳ್ಳುತ್ತಿದ್ದ ಕಾನೂನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ. ಇನ್ಮುಂದೆ ಅರ್ಜಿ ಹಾಕಿದ ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ನೂರಾರು ಕೋಟಿ ರೂ. ಒಳ ವ್ಯವಹಾರಗಳಿಗೆ ಕಡಿವಾಣ ಬೀಳಲಿದೆ ಎಂದು ಸಚಿವರು ವಿವರಿಸಿದ್ದಾರೆ.
ಭೂ ಪರಿವರ್ತನೆ ಮಾಡಿಕೊಡಲು ಆರು ತಿಂಗಳ ಸಮಯಾವಕಾಶ ಬೇಕಾಗಿರುವದರಿಂದ ಭೂಮಿ ಖರೀದಿಸಿದವರು ಹೂಡಿದ ಬಂಡವಾಳದ ಮೇಲೆ ವಿಪರೀತ ಬಡ್ಡಿ ಕಟ್ಟಬೇಕಾಗಿತ್ತು. ಅದೇ ಕಾಲಕ್ಕೆ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಹೀಗಾಗಿ ಕೈಗಾರಿಕೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಭೂಮಿ ಖರೀದಿಸಿದವರು ಅನಗತ್ಯ ಅಲೆದಾಟದಿಂದ ಬೇಸತ್ತಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದೆ ಎಂದರು.
ಭೂ ಪರಿವರ್ತನೆಗೆ ಅಲೆದಾಟ ತಪ್ಪಿಸಲು ಸರ್ಕಾರದ ಕ್ರಮ
ಭೂ ಪರಿವರ್ತನೆಗಾಗಿ ಅನಗತ್ಯ ಅಲೆದಾಟ ಭೂಮಿ ಖರೀದಿಸಿದವರಿಗೆ ಬೇರೆ, ಬೇರೆ ಬಗೆಯ ಹೊರೆ ಬೀಳುವಂತೆ ಮಾಡುತ್ತದೆ. ಇಂತಹ ಹೊರೆ ಬೀಳದಂತೆ ತಡೆಯುವುದೇ ಸರ್ಕಾರದ ಮುಖ್ಯ ಉದ್ದೇಶ. ಈ ಮುನ್ನ ಭೂಮಿ ಖರೀದಿಸಿದವರು ಒಂದು ಎಕರೆಗೆ 5 ಲಕ್ಷ ರೂ. ಅಧಿಕಾರಿಗಳ ಮಟ್ಟದಲ್ಲಿ ಪಾವತಿಸಬೇಕಾಗಿತ್ತು. ಇದರಿಂದ ವರ್ಷಕ್ಕೆ 300 ರಿಂದ 400ಕೋಟಿ ರೂ ವಹಿವಾಟು ನಡೆಯುತ್ತಿತ್ತು. ಇದೇ ಕಾರಣಕ್ಕಾಗಿ ನಿಯಮ 79(ಎ)ಮತ್ತು 79(ಬಿ)ಯನ್ನು ಸರ್ಕಾರ ಈಗಾಗಲೇ ರದ್ದುಗೊಳಿಸಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಭೂ ಪರಿವರ್ತನೆ ಕಾರ್ಯಕ್ಕೆ ಅರ್ಜಿ ಸಲ್ಲಿಸಿದವರಿಗೆ ಕೆಲವು ಕರಾರುಗಳನ್ನು ವಿಧಿಸಲಾಗುತ್ತದೆ. ಈ ಕರಾರುಗಳನ್ನು ಪೂರೈಸಿದ್ದರೆ ಸಮಸ್ಯೆ ಇಲ್ಲ. ಪರಿವರ್ತನೆಗೆ ಒಳಪಟ್ಟ ಭೂಮಿ ಒತ್ತುವರಿ ಭೂಮಿಯಾಗಿರಬಾರದು. ಪರಿಶಿಷ್ಟರ ಭೂಮಿಯಾಗಿರಬಾರದು ಎಂಬುದು ಸೇರಿದಂತೆ ವಿಧಿಸಲಾಗುವ ಹಲವು ಕರಾರುಗಳನ್ನು ಅರ್ಜಿದಾರರು ಪೂರೈಸಿದ್ದರೆ ಒಂದೇ ದಿನದಲ್ಲಿ ಅವರ ಅರ್ಜಿ ಪುರಸ್ಕರಿಸಲಾಗುವುದು ಎಂದರು. ಕಂದಾಯ ಇಲಾಖೆಯಿಂದ ಹಲವು ಕ್ರಾಂತಿಕಾರಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದು, ಜನರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವುದೇ ನಮ್ಮ ಮುಖ್ಯ ಗುರಿ ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿ: ಕರ್ತವ್ಯ ಮುಗಿಸಿ ಕನ್ಯೆ ನೋಡಲು ಹೊರಟಿದ್ದ ಕಾನ್ಸ್ಟೇಬಲ್ ರಸ್ತೆ ಅಪಘಾತದಲ್ಲಿ ಸಾವು