ಬೆಂಗಳೂರು :ಚಂದ್ರು ಹತ್ಯೆ ಕುರಿತು ಮಾಹಿತಿ ಪಡೆದುಕೊಂಡಿದ್ದೇನೆ. ಆರೋಪಿಗಳು ಉರ್ದು ಮಾತನಾಡಲು ಹೇಳಿದ್ದಾರೆ. ಆದರೆ, ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಎಂದಿದ್ದಾನೆ. ಅದಕ್ಕೆ ಆತನನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ. ಆತ ದಲಿತ ಹುಡುಗ. ಪ್ರಕರಣ ಸಂಬಂಧ ಪೊಲೀಸರು ಕೆಲವರನ್ನ ಬಂಧಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ(ಮಂಗಳವಾರ) ನಡೆದ ಚಂದ್ರು ಹತ್ಯೆ ಪ್ರಕರಣ ಕುರಿತು ಎಲ್ಲಾ ಮಾಹಿತಿ ತೆಗೆದುಕೊಂಡಿದ್ದೇವೆ. ಅಮಾನುಷವಾಗಿ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾರೆ. ಕೆಲ ಆರೋಪಿಗಳ ಬಂಧಿಸಿದ್ದು ಪ್ರಕರಣದ ತನಿಖೆಯಾಗುತ್ತಿದೆ ಎಂದರು.
ಹಿಂದೂ ಪರ ಸಂಘಟನೆಗಳಿಂದ ಮುಸ್ಲಿಂ ವ್ಯಾಪಾರ ನಿರ್ಬಂಧ ಅಭಿಯಾನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅಲ್ಲಲ್ಲಿ ಅನೇಕ ಹೇಳಿಕೆಗಳು ಬರುತ್ತಿವೆ. ಹಿಜಾಬ್‌ನಿಂದ ಪ್ರಾರಂಭವಾಗಿ ಬೇರೆ ಬೇರೆ ವಿಚಾರಗಳ ಚರ್ಚೆ ನಡೆಯುತ್ತಿದೆ. ಇವುಗಳಿಂದ ಕಾನೂನು ಸುವ್ಯವಸ್ಥೆಗೆ ಭಂಗ ಬಂದರೆ ಗೃಹ ಇಲಾಖೆಯಿಂದ ಕ್ರಮಕೈಗೊಳ್ಳಲಾಗುತ್ತದೆ. ಕಾನೂನು ಸುವ್ಯವಸ್ಥೆ ಹದಗೆಡುವ ಯಾವುದೇ ವಿಚಾರವಿದ್ದರೂ ಕ್ರಮ ಖಚಿತ. ಸರ್ಕಾರ, ಗೃಹ ಇಲಾಖೆ ಎಲ್ಲದರ ಮೇಲೆ ಕಣ್ಣಿಟ್ಟಿದೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಅಲ್ಪಸಂಖ್ಯಾತರ ಮತಗಳಿಗೆ ಬಲೆ ಬೀಸಿ ಕೂತಿದ್ದಾರೆ. ಅವರಿಗೆ ಬೇರೇನೂ ಬೇಡ. ಜನರ ನೆಮ್ಮದಿ ಬೇಕಾಗಿಲ್ಲ. ಜನಕ್ಕೆ ಸತ್ಯ ಹೇಳೋದು ಬೇಕಾಗಿಲ್ಲ. ಎರಡೂ ಪಕ್ಷದವರು ಓಲೈಕೆ ರಾಜಕಾರಣದಲ್ಲಿ ಕಳೆದು ಹೋಗುತ್ತಿದ್ದಾರೆ ಎಂದರು.