ಕರ್ನಾಟಕ

karnataka

ETV Bharat / state

ರಾಜ್ಯಾದ್ಯಂತ ಮೀನು ಊಟದ ಮನೆಗಳನ್ನು ಆರಂಭಿಸಲು ನಿರ್ಧಾರ: ಸಚಿವ ಎಸ್‌ ಅಂಗಾರ - Fisheries Department

ಬೆಂಗಳೂರಿನ ಐದು ಕಡೆ ಮೀನುಗಾರಿಕಾ ಇಲಾಖೆಯೇ ಹೊಸ ಮೀನಿನ ಊಟದ ಹೋಟೆಲ್​ಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಕೆರೆಗಳಿರುವ ಕಡೆ ಬಿಡಿಎ ಜಾಗ ಒದಗಿಸಲು ಒಪ್ಪಿದೆ ಎಂದು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್ ಅಂಗಾರ ತಿಳಿಸಿದ್ದಾರೆ.

ಸಚಿವ ಎಸ್ ಅಂಗಾರ
ಸಚಿವ ಎಸ್ ಅಂಗಾರ

By

Published : Aug 17, 2022, 5:52 PM IST

ಬೆಂಗಳೂರು: ಮೀನು ಪ್ರಿಯರಿಗೆ ಬಂಪರ್ ಕೊಡುಗೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಮೀನು ಊಟದ ಮನೆಗಳನ್ನು ಆರಂಭಿಸಲು ನಿರ್ಧರಿಸಿದೆ ಎಂದು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್. ಅಂಗಾರ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೀನುಗಾರಿಕಾ ಇಲಾಖೆಯ ವತಿಯಿಂದ ಬೆಂಗಳೂರು ಸೇರಿದಂತೆ ಕೆಲವು ಕಡೆ ಮೀನಿನ ಊಟದ ಹೋಟೆಲ್​ಗಳನ್ನು ಈ ಹಿಂದೆ ಸ್ಥಾಪಿಸಲಾಗಿದೆಯಾದರೂ ಹಣಕಾಸಿನ ಕೊರತೆಯ ಹಿನ್ನೆಲೆಯಲ್ಲಿ ವಿಸ್ತರಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಖಾಸಗಿ ಸಹಭಾಗಿತ್ವದಡಿ ಮೀನುಗಾರಿಕೆ ಇಲಾಖೆ ರಾಜ್ಯದ ಎಲ್ಲೆಡೆ ಮೀನು ಊಟದ ಮನೆಗಳನ್ನು ಪ್ರಾರಂಭಿಸಲಿದೆ ಎಂದು ಮಾಹಿತಿ ನೀಡಿದರು. ಆರಂಭಿಕ ಹಂತದಲ್ಲಿ ಬೆಂಗಳೂರಿನ ಐದು ಕಡೆ ಮೀನುಗಾರಿಕಾ ಇಲಾಖೆಯೇ ಹೊಸ ಮೀನಿನ ಊಟದ ಹೋಟೆಲ್​ಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಕೆರೆಗಳಿರುವ ಕಡೆ ಬಿಡಿಎ ಜಾಗ ಒದಗಿಸಲು ಒಪ್ಪಿದೆ ಎಂದರು.

ಗರಿಷ್ಟ ಪ್ರಮಾಣದ ಮೀನು ಉತ್ಪಾದನೆ: ರಾಜ್ಯದಲ್ಲಿ ಮತ್ಸ್ಯಕ್ರಾಂತಿ ನಡೆಯಲಿದ್ದು, ಇದಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ಮಾಡಿಕೊಂಡಿರುವುದಾಗಿ ತಿಳಿಸಿದ ಸಚಿವರು, ಕೆ.ಆರ್.ಎಸ್ ಆಲಮಟ್ಟಿ, ಲಿಂಗನಮಕ್ಕಿ, ಭದ್ರಾ ಸೇರಿದಂತೆ ರಾಜ್ಯದ ಹನ್ನೆರಡು ಪ್ರಮುಖ ಜಲಾಶಯಗಳಲ್ಲಿ ಗರಿಷ್ಟ ಪ್ರಮಾಣದ ಮೀನು ಉತ್ಪಾದನೆ ಮಾಡಲು ತೀರ್ಮಾನಿಸಿದೆ.

ರಾಜ್ಯದಲ್ಲಿ ಮೀನನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಎಲ್ಲ ಜಿಲ್ಲೆಗಳಲ್ಲಿ ಮೀನು ಮರಿ ಸಾಕಾಣಿಕೆ ಕೇಂದ್ರಗಳನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಇಂತಹ ಸಾಕಾಣಿಕೆ ಕೇಂದ್ರವನ್ನು ಆಲಮಟ್ಟಿ ಜಲಾಶಯದಲ್ಲೂ ಸ್ಥಾಪಿಸಲು ನಿರ್ಧರಿಸಿದೆ ಎಂದು ಮಾಹಿತಿ ನೀಡಿದರು.

ಜಲಾಶಯಗಳಲ್ಲಿ ಮೀನು ಮರಿ ಸಾಕಾಣಿಕೆ ಕೇಂದ್ರ: ಆಲಮಟ್ಟಿ ಜಲಾಶಯದಲ್ಲಿ ಮೀನು ಮರಿ ಸಾಕಾಣಿಕೆ ಮಾಡಲು ಇಪತ್ತೈದು ಎಕರೆ ಜಾಗವನ್ನು ನೀರಾವರಿ ಇಲಾಖೆ ಒದಗಿಸಿದೆ. ಇದೇ ರೀತಿ ಕೆ.ಆರ್.ಎಸ್ ಲಿಂಗನಮಕ್ಕಿ, ಭದ್ರಾ ಸೇರಿದಂತೆ ಹನ್ನೆರಡು ಪ್ರಮುಖ ಜಲಾಶಯಗಳಲ್ಲಿ ಮೀನು ಮರಿ ಸಾಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಲು, ಆ ಮೂಲಕ ಎಲ್ಲ ಜಲಾಶಯಗಳಲ್ಲಿ ಗರಿಷ್ಟ ಪ್ರಮಾಣದಲ್ಲಿ ಮೀನು ಉತ್ಪಾದಿಸಲು ತೀರ್ಮಾನಿಸಲಾಗಿದೆ.

ಹೊರರಾಜ್ಯಗಳಿಂದ ಮೀನು ಮರಿಗಳ ಆಮದು: ರಾಜ್ಯದಲ್ಲಿ ಒಳನಾಡು ಮೀನುಗಾರಿಕೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವುದಾಗಿ ನುಡಿದ ಅವರು, ಹೊರರಾಜ್ಯಗಳಿಂದ ಮೀನು ಮರಿಗಳನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆಯಿಂದ ಇದುವರೆಗೆ ಇದು ನಮಗೆ ಸಾಧ್ಯವಾಗಿರಲಿಲ್ಲ. ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಮೇಲಿದ್ದ ಇಂತಹ ಅವಲಂಬನೆಯನ್ನು ತಪ್ಪಿಸಲು ನಮ್ಮಲ್ಲೇ ಹೆಚ್ಚು ಮೀನು ಸಾಕಾಣಿಕಾ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿರುವುದರಿಂದ ಅನುಕೂಲವಾಗಲಿದೆ.

ಪ್ರತಿ ಜಿಲ್ಲೆಗಳಲ್ಲಿ ಸ್ಥಳೀಯ ಅಗತ್ಯಗಳಿಗೆ ಅನುಗುಣವಾದ ಮೀನಿನ ತಳಿಗಳನ್ನು ಉತ್ಪಾದಿಸುವುದು ನಮ್ಮ ಉದ್ದೇಶ. ಮಡೆಂಜಿ, ಮರೆಂಜಿ ತಳಿಯ ಮೀನುಗಳು ದಕ್ಷಿಣ ಕನ್ನಡದಲ್ಲಿ ಹೆಚ್ಚು. ಇದೇ ರೀತಿ ಆಯಾ ಜಿಲ್ಲೆಗಳಿಗೆ ವಿಶಿಷ್ಟವಾದ ತಳಿಗಳು ಇದ್ದು, ಅವನ್ನು ಅಭಿವೃದ್ದಿಪಡಿಸುವುದು ನಮ್ಮ ಯೋಚನೆ ಎಂದು ಎಸ್‌ ಅಂಗಾರ ಹೇಳಿದರು.

ಇದನ್ನೂ ಓದಿ:ಬೆಂಗಳೂರು: ಕೃಷ್ಣ ಜನ್ಮಾಷ್ಟಮಿ ದಿನ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

ABOUT THE AUTHOR

...view details