ಕರ್ನಾಟಕ

karnataka

ETV Bharat / state

ನಮ್ಮಲ್ಲಿ ಗುಡ್ಡಗಾಡು ಪ್ರದೇಶಗಳು ಹೆಚ್ಚು, ಅಂತಹ ಸ್ಥಳಕ್ಕೆ ಕಪಲ್ಸ್​ ಹೋಗಬಾರದು: ಸಚಿವ ಆನಂದ್ ಸಿಂಗ್

ಕೆಲ ನಿರ್ಜನ ಪ್ರದೇಶಗಳಲ್ಲಿ ಪೊಲೀಸರನ್ನಿಟ್ಟು ಕಾವಲು ಕಾಯಿಸುವುದಕ್ಕೆ ಆಗುವುದಿಲ್ಲ. ಜನರಲ್ಲಿ ನಾವು ಜಾಗೃತಿ ಮೂಡಿಸಬೇಕು. ಕೆಲವು ಘಟನೆ ಬೆಳಕಿಗೇ ಬರುವುದಿಲ್ಲ. ಇದರಿಂದ ಕೃತ್ಯ ಎಸಗುವವರು ಇನ್ನೂ‌ ಹೆಚ್ಚಾಗುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

minister-anand-singh-reaction-on-mysore-girl-gangrape-case
ನಮ್ಮಲ್ಲಿ ಗುಡ್ಡಗಾಡು ಪ್ರದೇಶಗಳು ಹೆಚ್ಚು, ಅಂತಹ ಸ್ಥಳಕ್ಕೆ ಕಪಲ್ಸ್​ ಹೋಗಬಾರದು: ಸಚಿವ ಆನಂದ್ ಸಿಂಗ್

By

Published : Aug 26, 2021, 10:18 PM IST

ಬೆಂಗಳೂರು:ನಮ್ಮಲ್ಲಿ ಗುಡ್ಡಗಾಡು ಪ್ರದೇಶಗಳು ಹೆಚ್ಚು. ಜೋಡಿಗಳು ಅಂತಹ ಸ್ಥಳಗಳಿಗೆ ಹೋಗಬಾರದು. ಅತ್ಯಾಚಾರವನ್ನೂ ಯಾರೇ, ಎಷ್ಟೇ ದೊಡ್ಡವರು ಮಾಡಿದ್ದರೂ ತಪ್ಪೇ. ಇಂತಹ ಬಹಳಷ್ಟು ಘಟನೆಗಳು ಬೆಳಕಿಗೆ ಬರುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಮೈಸೂರು ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದಾರೆ.

ಖನಿಜ ಭವನದಲ್ಲಿ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ನಮ್ಮದು ಹಂಪಿ‌ ಪ್ರವಾಸಿ ತಾಣವೇ, ರಿಮೋಟ್ ಏರಿಯಾಗಳಿಗೆ ಕಪಲ್ಸ್ ಬರ್ತಾರೆ. ಆದರೆ, ಇಂತಹ ಅನಾಹುತಕ್ಕೆ ಸಿಲುಕುತ್ತೇವೆ ಎಂದು ಅವರಿಗೆ ಗೊತ್ತಿರಲಿಲ್ಲ. ಕೆಲವು ಗುಂಪುಗಳು ಈ ಬಗ್ಗೆ ಗಮನಿಸುತ್ತಿರುತ್ತವೆ. ಬ್ಲ್ಯಾಕ್​ಮೇಲ್ ಮಾಡಿ ಹಣ ವಸೂಲಿ ಮಾಡುತ್ತಾರೆ. ಹೀಗಾಗಿ ಅಂತಹ ಸ್ಥಳಕ್ಕೆ ಕಪಲ್ಸ್ ಹೋಗಬಾರದು ಎಂದರು.

ಅಂತಹ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಪೊಲೀಸರನ್ನಿಟ್ಟು ಕಾವಲು ಕಾಯಿಸುವುದಕ್ಕೆ ಆಗುವುದಿಲ್ಲ. ಜನರಲ್ಲಿ ನಾವು ಜಾಗೃತಿ ಮೂಡಿಸಬೇಕು. ಕೆಲವು ಘಟನೆ ಬೆಳಕಿಗೇ ಬರುವುದಿಲ್ಲ. ಇದರಿಂದ ಕೃತ್ಯ ಎಸಗುವವರು ಇನ್ನೂ‌ ಹೆಚ್ಚಾಗುತ್ತಾರೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲೇಬೇಕು. ನಮ್ಮ‌ ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದಿದ್ದಾರೆ.

ಪರಿಸರ ಇಲಾಖೆ ಸಭೆ:

ನಿನ್ನೆ ನಾನು ಪರಿಸರ ಇಲಾಖೆ ಸಭೆ ನಡೆಸಿದ್ದೇನೆ. ರಿಮೋಟ್ ಏರಿಯಾಗೆ ಹೋಗಲು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹೆದರುತ್ತಿದ್ದರು. ದೂರು ಬಂದಾಗ ಕ್ರಮ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದರು. ಇದೀಗ ಅವರಿಗೆ ಎಲ್ಲವನ್ನೂ ವಿವರಿಸಿದ್ದೇವೆ. ಕ್ರಮ ಹೇಗೆ ತೆಗೆದುಕೊಳ್ಳಬೇಕೆಂಬ ಬಗ್ಗೆ ಚರ್ಚೆಯಾಗಿದೆ. ಅರಣ್ಯ ಇಲಾಖೆ ಕಾನೂನು ಬಹಳ ಕಠಿಣವಾಗಿದೆ. ಇದರ ಒಳಗೆ ಹೋಗಲು ಕಷ್ಟವಿದೆ. ಅಲ್ಲಿ ಕಾರ್ಖಾನೆಗಳ ಬಗ್ಗೆ ಗಮನಹರಿಸಲು ಸಾಧ್ಯವಿರಲಿಲ್ಲ.

ಆದರೆ, ಈಗ ಅಂತಹ ಸಮಸ್ಯೆಯಿಲ್ಲ. ಕಾರ್ಖಾನೆಗಳಿಗೆ ಹೋಗಿ ತಪ್ಪು ಸರಿಪಡಿಸುತ್ತೇವೆ. ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆ ನಿರ್ಧರಿಸಿದ್ದೇವೆ. ಕಾರ್ಖಾನೆಗಳಿಂದ ನದಿಗೆ ರಾಸಾಯನಿಕ ಹರಿಬಿಡಲಾಗುತ್ತಿದೆ. ಇದರಿಂದ ಜನ, ಜಾನುವಾರುಗಳಿಗೆ ತೊಂದರೆಯಾಗುತ್ತದೆ. ಇದನ್ನು ತಪ್ಪಿಸುವ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಕೆರೆಗಳ ನೈರ್ಮಲ್ಯ ಸುಧಾರಣೆಗೆ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.

ಖಾಸಗೀಕರಣದಿಂದ ಯಾವುದೇ ತೊಂದರೆ ಆಗಲ್ಲ:

ನಂದಿ ಬೆಟ್ಟದಲ್ಲಿ ಗುಡ್ಡ ಕುಸಿತ ಆಗಿದೆ. ನಾಳೆ ಅಲ್ಲಿಗೆ ಭೇಟಿ ನೀಡುತ್ತೇನೆ. ನಂದಿ ಬೆಟ್ಟವು ಸುಂದರ ಪ್ರವಾಸಿ ತಾಣವಾಗಿದ್ದು, ಇದನ್ನು ಖಾಸಗಿ‌ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲಾಗುವುದು. ಖಾಸಗೀಕರಣದಿಂದ ಯಾವುದೇ ಲೋಪವಾಗಲ್ಲ ಎಂದು ಇದೇ ವೇಳೆ ತಿಳಿಸಿದರು.

ಜಂಗಲ್ ಲಾಡ್ಜಸ್ ಕೂಡ ಸುಂದರ ತಾಣ. ಹಂಪಿಯಲ್ಲೂ ಪ್ರವಾಸೋದ್ಯಮ ಅಭಿವೃದ್ಧಿ ಮಾಡ್ತೇವೆ. ಇಂದು ಪ್ರವಾಸೋದ್ಯಮ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಪ್ರವಾಸೋದ್ಯಮಕ್ಕೆ 650 ಕೋಟಿ ರೂ. ಬೇಡಿಕೆ ಇಟ್ಟಿದ್ದೆವು.

ಆದರೆ, ಸರ್ಕಾರ 228 ಕೋಟಿ ರೂ. ಬಿಡುಗಡೆ ಮಾಡಿದ್ದು, ಇನ್ನುಳಿದ ಹಣ ಕೊರತೆಯಾಗಿದೆ. ನಾವು ಪ್ರಚಾರದ ಮೂಲಕವೇ ಜನರನ್ನು ತಲುಪಬೇಕು. ಕೋವಿಡ್​ ಮೂರನೇ ಅಲೆ ಬರುತ್ತೆ ಅಂತ ತಜ್ಞರು ಹೇಳುತ್ತಿದ್ದಾರೆ. ಸದ್ಯಕ್ಕೆ ಪ್ರವಾಸೋದ್ಯಮ ನಿಂತು ಹೋಗಿದೆ. 70 ಕೋಟಿ ಹಣವನ್ನ ಮೂಲಸೌಕರ್ಯಕ್ಕೆ ಬಳಸಿಕೊಳ್ಳುತ್ತೇವೆ. ನಮ್ಮಲ್ಲಿ ನೈಸರ್ಗಿಕ ಸಂಪತ್ತು ಹೆಚ್ಚಿದ್ದು, ಸರಿಯಾಗಿ ಬಳಸಿಕೊಳ್ಳಬೇಕಿದೆ. ಅನೇಕ ಸುಂದರ ತಾಣಗಳು ನಮ್ಮ ರಾಜ್ಯದಲ್ಲಿವೆ. ಸರ್ಕಾರದ ಹಣದಿಂದಲೇ ಸೌಲಭ್ಯ ಕಲ್ಪಿಸುವುದು ಕಷ್ಟ. ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ಚಿಂತಿಸಿದ್ದೇವೆ ಎಂದರು.

ಪರಿಸರ ರಕ್ಷಣೆಗೆ ಅರಶಿಣ ಗಣೇಶ:

ಪರಿಸರ ರಕ್ಷಣೆಗೆ ಅರಶಿಣ ಗಣೇಶ ಸಹಕಾರಿಯಾಗಲಿದೆ. ಅರಿಶಿಣ ಅಂದ್ರೆ ಸಂಸ್ಕೃತಿಗೆ ಹತ್ತಿರವಾದದ್ದು. ಜೊತೆಗೆ ಅರಿಶಿಣವು ಔಷಧಿಗೂ ಉಪಯೋಗವಾದುದು. ಹಾಗಾಗಿ ಈ ಸಂಬಂಧ ಅಭಿಯಾನ ಹಮ್ಮಿಕೊಂಡಿದ್ದೇವೆ. ಜನರೇ ಅರಿಶಿನ ಗಣೇಶ ಮಾಡಲಿ ಅನ್ನೋದು ನಮ್ಮ ಚಿಂತನೆಯಾಗಿದೆ. ಇಲಾಖೆ ಈ ಗಣೇಶನನ್ನು ಮಾಡಿ ವಿತರಿಸಲ್ಲ. ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಕೆಲ ವಿಚಾರ ಹೇಳಲಾಗುವುದಿಲ್ಲ:

ಖಾತೆ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೆಲವು ವಿಚಾರಗಳನ್ನು ಹೇಳುವುದಕ್ಕೆ ಆಗುವುದಿಲ್ಲ. ಮುಂದೆ ಏನಾಗುತ್ತೆ ಅನ್ನೋದನ್ನು ನಾನು ಚರ್ಚೆ ಮಾಡಲ್ಲ. ನಾನು ಹಿರಿಯರ ಆದೇಶ ಪಾಲನೆ ಮಾಡುವ ವ್ಯಕ್ತಿ. ಖಾತೆ ಬದಲಾವಣೆಗೆ ಈಗ ಸೂಕ್ತ ಸಮಯ ಅಲ್ಲ ಎಂದಿದ್ದಾರೆ. ಅವರ ಸಲಹೆಗೆ ತಲೆ ಬಾಗುತ್ತೇನೆ. ನಾನು ನಂಬಿಕೆ, ವಿಶ್ವಾಸ, ಆತ್ಮವಿಶ್ವಾಸದ ಮೇಲೆ ನಡೆಯುವವನು. ಮಾತು ಕೊಟ್ಟ ಮೇಲೆ ಅದೇ ರೀತಿ ನಡೆದುಕೊಳ್ಳುವವನು. ಹಾಗಾಗಿ ಭಾವನಾತ್ಮಕವಾಗಿ ಹಾಗೆ ನಡೆದುಕೊಂಡೆ. ನನಗೆ ಇದೇ ಬೇಕು ಅದೇ ಬೇಕು ಅನ್ನುವವನಲ್ಲ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ:Mysuru Gangrape Case: ಮೂವರು ಆರೋಪಿಗಳ ಬಂಧನ?..ಪೊಲೀಸ್​ ತನಿಖೆ ಇನ್ನಷ್ಟು ಚುರುಕು!!

ABOUT THE AUTHOR

...view details