ಬೆಂಗಳೂರು : ಸಂಗಮದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಮಾಡುವ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಲು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದೇನೆ ಹೊರತು ಬೇರೆ ಯಾವುದೇ ರೀತಿಯ ರಾಜಕೀಯ ಕಾರಣ ಇಲ್ಲ. ಈ ರೀತಿಯಲ್ಲಿ ಸುದ್ದಿಯಾಗಲಿದೆ ಎನ್ನುವುದು ಗೊತ್ತಿದ್ದರೆ ಡಿಕೆಶಿ ನಿವಾಸಕ್ಕೆ ಭೇಟಿ ನೀಡುತ್ತಲೇ ಇರಲಿಲ್ಲ ಎಂದು ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಅವರ ಮನೆಗೆ ಹೋಗಬಾರದಾ?. ನೀವೇ ಹೇಳಿ. ನಾನು ಏಕೆ ಹೋಗಿದ್ದೆ ಎಂದು ಅವರೇ ಹೇಳಿದ್ದಾರೆ. ಅದರಲ್ಲಿ ಬೇರೆ ಏನಿಲ್ಲ. ಮುನಿರೆಡ್ಡಿಪಾಳ್ಯದಲ್ಲಿ ನಮ್ಮ ಅಳಿಯನ ಮನೆಗೆ ತಿಂಡಿಗೆ ಖಾಸಗಿ ಕಾರಿನಲ್ಲಿ ಹೋಗಿದ್ದೆ.
ಈ ವೇಳೆ ಡಿ. ಕೆ ಶಿವಕುಮಾರ್ ಅವರು ಫೋನ್ ಮಾಡಿದ್ದರು. ಕಾವೇರಿ ಆರತಿ ಬಗ್ಗೆ ವಿಷಯ ಪ್ರಸ್ತಾಪ ಮಾಡಿದರು. ಮನೆಗೆ ಬನ್ನಿ ಮಾತಾಡೋಣ ಅಂದರು. ಹೀಗಾಗಿ, ಖಾಸಗಿ ಕಾರಿನಲ್ಲೇ ಹೋಗಿದ್ದೆ. ಅದನ್ನೇ ಮಾಧ್ಯಮಗಳಲ್ಲಿ ದೊಡ್ಡ ವಿಚಾರ ಮಾಡಲಾಗಿದೆ. ಆ ರೀತಿ ಏನೂ ಇಲ್ಲ ಎಂದರು.