ಬೆಂಗಳೂರು: ಬ್ಲಾಕ್ ಫಂಗಸ್ ಬಗ್ಗೆ ತಜ್ಞರ ವರದಿ ಕೇಳಿದ್ದೇವೆ. ಉಚಿತ ಚಿಕಿತ್ಸೆ ಬಗ್ಗೆ ಶೀಘ್ರವೇ ನಿರ್ಧರಿಸುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಹಿನ್ನೆಲೆ ಸಚಿವ ಸುಧಾಕರ್ 3 ಜಿಲ್ಲೆಗಳ ಪ್ರವಾಸ ಆರಂಭಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಿದ್ದಾರೆ.
ಕೊರೊನಾ ಚಿಕಿತ್ಸೆ ಉಚಿತ ನೀಡಲು ಚಿಂತನೆ.. ಸಚಿವ ಡಾ.ಕೆ.ಸುಧಾಕರ್ ಪ್ರವಾಸದ ಮೊದಲು ತಮ್ಮ ಸದಾಶಿವನಗರದ ನಿವಾಸದೆದುರು ಮಾಧ್ಯಮಗಳಿಗೆ ಬ್ಲಾಕ್ ಫಂಗಸ್ ಹೆಚ್ಚಾಗುತ್ತಿರುವ ವಿಚಾರವಾಗಿ ಮಾಹಿತಿ ನೀಡುತ್ತಾ, ನಾನು ನಿನ್ನೆಯೇ ತಾಂತ್ರಿಕ ಸಲಹಾ ಸಮಿತಿಯ ಜೊತೆ ಮಾತನಾಡಿದ್ದೇನೆ. ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆದಿದೆ.
ಬ್ಲಾಕ್ ಫಂಗಸ್ ಕೆಲವು ಭಾಗದಲ್ಲಿ ವರದಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಕೊಡಿ ಎಂದಿದ್ದೇನೆ. ಬಹುಶಃ ಇಂದು ಅಥವಾ ನಾಳೆ ವರದಿ ಸಲ್ಲಿಸುತ್ತಾರೆ ಎಂದು ತಿಳಿಸಿದರು.
ಡಬಲ್ ಮ್ಯುಟೆಂಟ್ ವೈರಸ್ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಈಗಾಗಲೇ ಜಿಯೋಲಾಜಿಕಲ್ ಅಧ್ಯಯನ ಮಾಡಲಾಗಿದೆ. ಅದರ ಬಗ್ಗೆ ಸೀಕ್ವೆನ್ಸಿಂಗ್ ಮಾಡಿ ಎಂದಿದ್ದೇನೆ. ಈಗಾಗಲೇ ವಿದೇಶಗಳಲ್ಲಿ ಇದನ್ನು ಇಂಡಿಯನ್ ವೇರಿಯಂಟ್ ಎಂದು ಕರೆದಿದ್ದಾರೆ.
ಬ್ರಿಟಿಷ್ ವೇರಿಯಂಟ್ಗಿಂತ ಸ್ವಲ್ಪ ವಿಭಿನ್ನವಾಗಿ ವರ್ತಿಸುತ್ತಿದೆ. ಅದರ ಗುಣಗಳನ್ನು ವಿಜ್ಞಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ವಿಶ್ವದಲ್ಲಿ ಪ್ರತಿಷ್ಠಿತ ಸಂಸ್ಥೆಗಳು ಅಧ್ಯಯನ ಮಾಡುತ್ತಿವೆ ಎಂದು ಸುಧಾಕರ್ ತಿಳಿಸಿದರು.
ಆರೋಗ್ಯ ವಿಚಾರವಾಗಿ 350 ಕೋಟಿ ರೂ.ಖರ್ಚು :ಬ್ಲಾಕ್ ಫಂಗಸ್ಗೆ ಮಹಾರಾಷ್ಟ್ರದಲ್ಲಿ ಉಚಿತ ಚಿಕಿತ್ಸೆ ವಿಚಾರವಾಗಿ ಮಾತನಾಡಿ, ಇಡೀ ದೇಶದಲ್ಲಿ ಯಾರಾದ್ರೂ ಸಂಪೂರ್ಣ ಚಿಕಿತ್ಸೆ ಉಚಿತವಾಗಿ ನೀಡಿದ್ದಾರೆ ಎಂದರೆ ಅದು ಕರ್ನಾಟಕ. ಕಳೆದ ವರ್ಷ ಸುಮಾರು 350 ಕೋಟಿ ರೂ. ಆರೋಗ್ಯ ವಿಚಾರವಾಗಿ ಖರ್ಚು ಮಾಡಿದ್ದೇವೆ.
ಟೆಸ್ಟಿಂಗ್, ಕ್ವಾರಂಟೈನ್, ಕೋವಿಡ್ ಕೇರ್ ಸೆಂಟರ್ನಲ್ಲಿ ಔಷಧ ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದ್ದೇವೆ. ಆಸ್ಟ್ರೇಲಿಯಾ ಪ್ರಜೆಗಳು ತಮ್ಮ ದೇಶಕ್ಕೆ ಹೋದರೆ ಕ್ವಾರಂಟೈನ್ ಶುಲ್ಕ ವಿಧಿಸುತ್ತಿದ್ದಾರೆ.1ಲಕ್ಷ 80 ಸಾವಿರ ರೂ. ದರವನ್ನು ನಿಗದಿಪಡಿಸುತ್ತಿದ್ದಾರೆ ಎಂದು ತಿಳಿಸಿದರು.
2ನೇ ಅಲೆಯ ಪೋಸ್ಟ್ ಕೋವಿಡ್ನಲ್ಲಿ ಬರುವ ಮಾಹಿತಿ ಬಂದಿದೆ. ಸರ್ಕಾರದ ನಿಲುವು ಏನು ತೆಗೆದುಕೊಳ್ಳಬೇಕು ಎಂದು ನೋಡಬೇಕಾಗುತ್ತದೆ. ತಾಂತ್ರಿಕ ಸಲಹಾ ಸಮಿತಿ ಜೊತೆ ಮಾತನಾಡಿ ಮೊದಲು ಈ ಬಗ್ಗೆ ವರದಿ ತರಿಸಿಕೊಳ್ಳುತ್ತೇವೆ. ನಂತರ ಉನ್ನತ ಮಟ್ಟದಲ್ಲಿ ಚರ್ಚೆ ಮಾಡಿ ಎರಡು ದಿನದಲ್ಲಿ ತೀರ್ಮಾನ ಮಾಡುತ್ತೇನೆ ಎಂದರು.
ನೇರವಾಗಿ ಭೇಟಿ ನೀಡಿದರೆ ಸಮಸ್ಯೆ ತಿಳಿಯುತ್ತದೆ :ನಾನು ತಾಲೂಕು ಕೇಂದ್ರದ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದೇನೆ. ಕೆ.ಆರ್.ಪುರ, ಹೊಸಕೋಟೆ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆ ಭೇಟಿ ನೀಡುತ್ತೇನೆ. ನೇರವಾಗಿ ತಾಲೂಕಿನ ಆಸ್ಪತ್ರೆಗಳಿಗೆ ಭೇಟಿ ಕೊಟ್ಟರೆ ರೋಗಿಗಳಿಗೆ ಯಾವ ರೀತಿ ಚಿಕಿತ್ಸೆ ಸಿಗುತ್ತಿದೆ ಎಂದು ತಿಳಿಯುತ್ತದೆ.
ನಾವು ಆಯಾ ಸ್ಥಳಗಳಲ್ಲಿ ಹೋಗಿ ಭೇಟಿ ಕೊಡದೆ ಹೋದರೆ ಏನು ಸಮಸ್ಯೆಗಳಿವೆ ಎನ್ನುವುದು ತಿಳಿಯುವುದಿಲ್ಲ. ಹಾಗಾಗಿ, ಖುದ್ದಾಗಿ ಆಸ್ಪತ್ರೆಗಳಿಗೆ ಭೇಟಿ ಕೊಡುತ್ತಿದ್ದೇನೆ. ಈಗಾಗಲೇ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಬಂದಿರುವೆ. ಅದೇ ರೀತಿ ಇಂದು ಕೆಲವು ಕಡೆ ಭೇಟಿ ನೀಡುತ್ತಿದ್ದೇನೆ ಎಂದು ಸಚಿವ ಸುಧಾಕರ್ ತಿಳಿಸಿದರು.
ಓದಿ:ಕೋವಿಡ್ ಆರ್ಭಟಕ್ಕೆ ಬೆಂಗಳೂರು ತತ್ತರ: ಅಂತ್ಯಕ್ರಿಯೆಗಾಗಿ ಚಿತಾಗಾರಗಳ ಮುಂದೆ ಕ್ಯೂ!