ಬೆಂಗಳೂರು: ದೇಶದ ಜಿಡಿಪಿಗೆ ಗಣಿಗಾರಿಕೆಯಿಂದಲೇ ಶೇ 2.5 ರಷ್ಟು ಕೊಡುಗೆ ನೀಡಲಿದ್ದೇವೆ ಕೇಂದ್ರ ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ವಾಣಿಜ್ಯ ಕಲ್ಲಿದ್ದಲು ಬ್ಲಾಕ್ಗಳ ಹರಾಜು ಹಾಗೂ ಗಣಿಗಾರಿಕೆ ಹೂಡಿಕೆ ಅವಕಾಶಗಳ ಕುರಿತು ಬೆಂಗಳೂರಿನಲ್ಲಿ ನಡೆಯುತ್ತಿರುವ ಹೂಡಿಕೆದಾರರ ಸಮಾವೇಶವನ್ನ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಕಲ್ಲಿದ್ದಲು ಸೇರಿದಂತೆ ಗಣಿಗಾರಿಕೆಯಲ್ಲಿ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. 2047ರ ವೇಳೆಗೆ ಭಾರತ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದ್ದು, ಹೇರಳವಾದ ವಿದ್ಯುತ್ ಉತ್ಪಾದನೆ ಅಗತ್ಯವಾಗಿದೆ. ಸಹಜವಾಗಿ ಕಲ್ಲಿದ್ದಲು ಬೇಡಿಕೆ ಕೂಡ ಹೆಚ್ಚಲಿದ್ದು, ಹೂಡಿಕೆದಾರಿಗೆ ಕಲ್ಲಿದ್ದಲು ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದ ಇಂಧನ ಹಾಗೂ ಖನಿಜ ಸಂಪತ್ತಿನ ಸುರಕ್ಷತೆಯನ್ನು ಕಾಪಾಡಲು ನಮ್ಮಲ್ಲಿರುವ ಕಲ್ಲಿದ್ದಲು ಹಾಗೂ ಖನಿಜ ಸಂಪನ್ಮೂಲದ ಸುಸ್ಥಿರ ಉಪಯೋಗ ಅವಶ್ಯಕವಾಗಿದೆ. ಈ ದೃಷ್ಟಿಯಿಂದ ಕ್ಷೇತ್ರದಲ್ಲಿ ಹೂಡಿಕೆಯ ಅವಶ್ಯಕತೆ ಇದ್ದು, ಆಸಕ್ತ ಹೂಡಿಕೆದಾರರೊಂದಿಗೆ ನಾವು ನಿರಂತರ ಚರ್ಚೆಯಲ್ಲಿ ತೊಡಗುವ ಉದ್ದೇಶದಿಂದ ಈ ಸಮಾವೇಶ ನಡೆಸುತ್ತಿದ್ದೇವೆ ಎಂದು ಹೇಳಿದರು.
ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಸ್ತುತ ನಡೆಯುತ್ತಿರುವ ಕಲ್ಲಿದ್ದಲು ಹಾಗೂ ಖನಿಜಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಹೂಡಿಕೆದಾರರಿಗೆ ಮುಕ್ತ ಆಹ್ವಾನ ನೀಡಲಾಗಿದೆ. ಸದ್ಯ ರಾಜ್ಯದಲ್ಲಿ ಏಳು ಕಲ್ಲಿದ್ದಲು ಬ್ಲಾಕ್ಗಳ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಆರನೇ ಕಂತಿನ 141 ಕಲ್ಲಿದ್ದಲು ಬ್ಲಾಕ್ಗಳು ಕೂಡ ಹರಾಜಿಗೆ ಲಭ್ಯವಿದೆ ಎಂದರು.
ವಿದ್ಯುತ್ ಬೇಡಿಕೆ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಿದೆ. ನನ್ನ ಪ್ರಕಾರ 2040 ರಲ್ಲಿ ಇಂಧನ ಬೇಡಿಕೆ ಡಬಲ್ ಆಗಲಿದೆ. ಇಂಥ ಸಂದರ್ಭದಲ್ಲಿ ನಮ್ಮ ತಯಾರಿಯನ್ನು ಪೂರ್ತಿಯಾಗಿಡಬೇಕು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ವಿದ್ಯುತ್ 25 % ಹೆಚ್ಚು ಬೇಡಿಕೆ ಇದೆ. ಒಂದು ಕಡೆ ನವೀಕರಿಸಬಹುದಾದ ಇಂಧನ ಶೇಖರಣೆ ಮಾಡುತ್ತಿದ್ರೂ ಸಹ ಪರ್ಯಾಯ ಇಂಧನ ಸುಸ್ಥಿರತೆ ಬಗ್ಗೆ ಗಮನ ಕೊಡಬೇಕು. ವಿದ್ಯುತ್ ಉತ್ಪಾದನೆ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಜಿಡಿಪಿ ಎಂದರೆ ಏನೂ ಅಂತಾನೇ ತಿಳಿಯದೇ ಕಾಂಗ್ರೆಸ್ ಭಾಷಣ ಮಾಡುತ್ತಿದೆ: ಸಂಸದ ಹೆಗಡೆ ಟೀಕೆ
ಈ ವಿದ್ಯುತ್ ಉತ್ಪಾದನಾ ವೇಳೆ ಮಾಲಿನ್ಯ ಸಹ ಆಗುತ್ತದೆ. ಆಗ ಗಿಡಗಳನ್ನ ಹೆಚ್ಚು ಬೆಳೆಸುವುದು ಹಾಗೂ ಗಣಿಗಾರಿಕೆಯಿಂದ ಬರುವ ತ್ಯಾಜ್ಯ ನೀರಿನ್ನ ಮನುಷ್ಯರಿಗೆ ಮತ್ತು ನೀರಾವರಿಗೆ ಬಳಸುವ ಮೂಲಕ ಸುಸ್ಥಿರತೆ ಕಾಪಾಡಿಕೊಳ್ಳವ ಎಲ್ಲಾ ಕ್ರಮಗಳನ್ನ ಕೈಗೊಳ್ಳುವ ಮೂಲಕ ಕಲ್ಲಿದ್ದಲು ಉತ್ಪಾದನೆ ಮಾಡಬೇಕು. ಹಾಗೆಯೇ ಉಪಯೋಗ ಮಾಡಿಕೊಳ್ಳಬೇಕು. ಇದರಿಂದ ಹೆಚ್ಚು ಮಾಲಿನ್ಯವಾಗಬಾರದು ಎಂಬ ತಂತ್ರಜ್ಞಾನದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ:ಆರ್ಥಿಕ ಸಂಕಟ: ರಾಜ್ಯದ ಜಿಡಿಪಿ 3 ಲಕ್ಷ ಕೋಟಿ ರೂ. ರಷ್ಟು ಕುಗ್ಗುವ ಆತಂಕ!
141 ಕಲ್ಲಿದ್ದಲು ಬ್ಲಾಕ್ಗಳನ್ನ ಹರಾಜು ಮಾಡಲಾಗಿದೆ. ಕಲ್ಲಿದ್ದಲು ಹೊರತುಪಡಿಸಿ ಬೇರೆ ಬೇರೆ ಗಣಿಗಾರಿಕೆಯ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಅತ್ಮನಿರ್ಭರ ಭಾರತದಲ್ಲಿ ಹೂಡಿಕೆಯಾಗಬೇಕು. ಈಗಾಗಲೇ ಇಡೀ ದೇಶದಲ್ಲಿ 67 ಗಣಿ ಕಂಪನಿಗಳಿಗೆ ಹರಾಜು ಮಾಡಲಾಗಿದೆ. ಒಂದು ವರ್ಷದಲ್ಲಿ ಬದಲಾವಣೆ ತಂದಿದ್ದೇವೆ. ಗಣಿಗಾರಿಕೆಯ ಹೊಸ ನೀತಿಗಳಲ್ಲಿ ಸಹ ಸಾಕಷ್ಟು ಬದಲಾವಣೆ ತಂದಿದ್ದೇವೆ. ಇದರಿಂದ ಕಳೆದ ಒಂದು ವರ್ಷದಲ್ಲಿ 115 ಬ್ಲಾಕ್ಸ್ಗಳು ಹರಾಜಾಗಿವೆ ಎಂದು ವಿವರಿಸಿದರು.