ಬೆಂಗಳೂರು:ಹಿರಿಯ ಭೂ ವಿಜ್ಞಾನಿ ಪ್ರತಿಮಾ ಕೆ.ಎಸ್. (45) ಹತ್ಯೆ ಪ್ರಕರಣ ಸಂಬಂಧ ಈ ಹಿಂದೆ ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಾಪುರ್ ಅವರು ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದರು.
ಆರೋಪಿ ಕಿರಣ್ ಕಳೆದ ಎಂಟು ವರ್ಷಗಳಿಂದ ಗಣಿ ಇಲಾಖೆ ಪ್ರಧಾನ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇರೆಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ನಾಲ್ಕು ವರ್ಷಗಳಿಂದ ಪ್ರತಿಮಾ ಅವರ ಕಾರು ಚಾಲಕನಾಗಿದ್ದ. ವಿವಿಧ ಕಾರಣಕ್ಕಾಗಿ ಎರಡು ತಿಂಗಳ ಹಿಂದೆ ಕೆಲಸದಿಂದ ತೆಗೆದುಹಾಕಲಾಗಿತ್ತು. ಕೊಲೆಗೂ ಮುನ್ನ ನ. 3 ರಂದು ಪ್ರತಿಮಾ ಭೇಟಿ ಮಾಡಲು ಕಿರಣ್ ಬಂದಿದ್ದ, ಆದರೆ ಪ್ರತಿಮಾ ಸಿಕ್ಕಿರಲಿಲ್ಲ. ನ.4 ರಂದು ರಾತ್ರಿ ಮತ್ತೆ ಬಂದು ಕೆಲಸಕ್ಕೆ ಮರಳಿ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದ. ಮನವಿಗೆ ಸ್ಪಂದಿಸದ ಹಿನ್ನೆಲೆ ಪ್ರತಿಮಾ ಕೊಲೆ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಭಾನುವಾರ ಪ್ರತಿಮಾ ಸಹೋದರ ಪ್ರತೀಶ್ ಎಂಬುವರು ಪೊಲೀಸರಿಗೆ ಕರೆ ಮಾಡಿ ನೀಡಿದ ಮಾಹಿತಿ ಪ್ರಕಾರ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಹತ್ಯೆ ಬೆಳಕಿಗೆ ಬಂದಿತ್ತು. ಆರೋಪಿ ಪತ್ತೆಗೆ ಮೂರು ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಪ್ರತಿಮಾ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ವಿಚಾರಣೆ ನಡೆಸಲಾಗಿತ್ತು. ಪ್ರತಿಮಾ ಸಂಪರ್ಕದಲ್ಲಿದ್ದವರನ್ನೂ ಸಹ ವಿಚಾರಣೆ ಮಾಡಲಾಗಿತ್ತು. ಈ ವೇಳೆ ಮಾಜಿ ಚಾಲಕ ಕಿರಣ್, ಪ್ರತಿಮಾರನ್ನು ಸಂಪರ್ಕಿಸಿರುವುದು ತಿಳಿದುಬಂದಿದ್ದು, ಬಳಿಕ ತನಿಖೆ ಕೈಗೊಂಡಾಗ ಆರೋಪಿ ಮಲೆಮಹದೇಶ್ವರ ಬೆಟ್ಟದ ಬಳಿ ಅವಿತುಕೊಂಡಿರುವುದು ಗೊತ್ತಾಗಿತ್ತು. ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ತಿಳಿಸಿದರು.