ಕರ್ನಾಟಕ

karnataka

ETV Bharat / state

ಸಿರಿಧಾನ್ಯ ಮೇಳ ಯಶಸ್ವಿ, ವ್ಯಾಪಾರೋದ್ಯಮಿಗಳಿಂದ 5.10 ಕೋಟಿ ಮೌಲ್ಯದ ಒಡಂಬಡಿಕೆ: ಸಚಿವ ಚಲುವರಾಯಸ್ವಾಮಿ - ಸಾವಯವ

ರಾಜ್ಯದ ಎಲ್ಲ ಜಿಲ್ಲೆಗಳ ರೈತರು ಹೆಚ್ಚು ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯಬೇಕು. ಪ್ರಸ್ತುತ ಹೆಕ್ಟೇರ್​ಗೆ 10 ಸಾವಿರ ಪ್ರೋತ್ಸಾಹ ಧನ ನೀಡುತ್ತಿದ್ದು, ಅದನ್ನು ಹೆಚ್ಚಿಸಲು ಪರಿಶೀಲಿಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

Minister with businessmen
ವ್ಯಾಪಾರೋದ್ಯಮಿಗಳೊಂದಿಗೆ ಸಚಿವರು

By ETV Bharat Karnataka Team

Published : Jan 6, 2024, 5:50 PM IST

ಬೆಂಗಳೂರು:ಸಿರಿಧಾನ್ಯಗಳ ಕುರಿತಂತೆ 5.10 ಕೋಟಿ ರೂ. ಮೌಲ್ಯದ ಒಡಂಬಡಿಕೆ ನಡೆದಿದ್ದು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಯಶಸ್ವಿಯಾಗಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಅರಮನೆ ಮೈದಾನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮೊದಲ ದಿನವೇ 60ಕ್ಕೂ ಸಾವಿರಕ್ಕಿಂತ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು. ಮಾರುಕಟ್ಟೆ ಮೌಲ್ಯದ ಪೈಕಿ 1,361 ಮೆಟ್ರಿಕ್ ಟನ್ ಪ್ರಮಾಣ ಸಿರಿಧಾನ್ಯಕ್ಕೆ ಸಂಬಂಧಿಸಿದಂತೆ 5.10 ಕೋಟಿ ಮೌಲ್ಯದ 6 ಒಪ್ಪಂದಗಳಾಗಿವೆ.

ಕೀನ್ಯಾ, ಕುವೈತ್, ಆಸ್ಟ್ರೇಲಿಯಾ, ಯೂರೋಪ್, ಯುಎಇ ದೇಶಗಳ ವ್ಯಾಪಾರೋದ್ಯಮಿಗಳು ಮೇಳದಲ್ಲಿ ಭಾಗವಹಿಸಿದ್ದಾರೆ. ಏಳು ಅಂತಾರಾಷ್ಟ್ರೀಯ, 40 ಹೊರ ರಾಜ್ಯಗಳ ಹಾಗೂ 50 ರಾಜ್ಯದ ವ್ಯಾಪಾರೋದ್ಯಮಿಗಳು ಸಭೆಗಳಲ್ಲಿ ಭಾಗವಹಿಸಿದ್ದಾರೆ. 97 ಮಾರುಕಟ್ಟೆದಾರರು, 154 ಉತ್ಪಾದಕರು ಬಿ2ಬಿ ಸಭೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.

310 ಮಳಿಗೆಗಳು ಮೇಳದಲ್ಲಿದ್ದು, 190 ಮಳಿಗೆಗಳು ಸಾವಯವ ಮತ್ತು ಸಿರಿಧಾನ್ಯ ಸಂಸ್ಥೆಗಳು, ರಫ್ತುದಾರರು, ಮಾರಾಟಗಾರರು, ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಸಾವಯವ ಪರಿಕರ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ ಸಂಸ್ಥೆಗಳು ಪಾಲ್ಗೊಂಡಿವೆ ಎಂದರು.

ರಾಜ್ಯದ ಎಲ್ಲ ಜಿಲ್ಲೆಗಳ ರೈತರು ಹೆಚ್ಚು ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯಬೇಕು. ಕಡಿಮೆ ಖರ್ಚು ಕಡಿಮೆ ಸಮಯದಲ್ಲಿ ಬೆಳೆದು ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು‌ ಎಂದರು.

ಪ್ರೋತ್ಸಾಹ ಧನ ಹೆಚ್ಚಳ ಪರಿಶೀಲನೆ: ಪ್ರಸ್ತುತ ಹೆಕ್ಟೇರ್​ಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ಅದನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಸಿರಿಧಾನ್ಯದ ಆಹಾರದ ಉತ್ಪನ್ನಗಳು ಹೆಚ್ಚು ರುಚಿಕರವಾಗಿವೆ. ನವಣೆ ಮಸಾಲೆ ಬ್ರೆಡ್, ರಾಗಿ ಬ್ರೆಡ್, ಫಿಜ್ಜಾ, ಬರ್ಗರ್, ನೂಡಲ್ಸ್, ವಿವಿಧ ರೀತಿ ಬಿಸ್ಕತ್ತು, ಚಕ್ಕುಲಿ, ಚಿಕ್ಕಿ ಅಲ್ಲದೆ ವಿಶೇಷವಾಗಿ ಯುವ ಪೀಳಿಗೆ ಇಷ್ಟ ಪಡುವ ಆಧುನಿಕ ಸಿರಿಧಾನ್ಯ ಬ್ರೌನಿ, ಬಫ್ತಿನ್ಸ್, ರಾಗಿ ಚಾಕಲೇಟ್, ಜಾಮುನು ಮೇಳದಲ್ಲಿ ಆಕರ್ಷಕ ಆಗಿದ್ದವು ಎಂದು ತಿಳಿಸಿದರು.

ಈ ವರ್ಷ 16 ರಾಜ್ಯಗಳು ಭಾಗವಹಿಸಿದ್ದು, ಹೆಚ್ಚು ಅರ್ಥಪೂರ್ಣವಾಗಿದೆ. 50 ಪರಿಣಿತರು ವಿವಿಧ ವಿಷಯ ಬಗ್ಗೆ ಉಪನ್ಯಾಸ ನೀಡಿದ್ದಾರೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಉತ್ತೇಜನ ನೀಡಲು ರೈತ ಸಿರಿ ಯೋಜನೆಯಡಿ ಹೆಕ್ಟೇರ್​ಗೆ 10 ಸಾವಿರದಂತೆ ಒಂದು ಲಕ್ಷ ರೈತರಿಗೆ ಪ್ರೋತ್ಸಾಹ ಧನ ನೀಡಲಾಗಿದೆ ಎಂದು ಹೇಳಿದರು.

ಮಾಧ್ಯಮಗೋಷ್ಟಿಯಲ್ಲಿ ಕೃಷಿ ಇಲಾಖೆ ಆಯುಕ್ತ ಪಾಟೀಲ್, ನಿರ್ದೇಶಕ ಡಾ. ಪುತ್ರ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಿ ವೈ ಶ್ರೀನಿವಾಸ್ ಉಪಸ್ಥಿತರಿದ್ದರು.

ಇದನ್ನೂಓದಿ:ಇಂದಿರಾ ಕ್ಯಾಂಟೀನ್, ಶಾಲಾ ಬಿಸಿಯೂಟದಲ್ಲಿ ಸಿರಿಧಾನ್ಯ ಬಳಕೆಗೆ ಶೀಘ್ರ ಕ್ರಮ: ಸಿಎಂ

ABOUT THE AUTHOR

...view details