ಬೆಂಗಳೂರು:ಸಿರಿಧಾನ್ಯ ಹಾಗೂ ಸಾವಯವ ಉತ್ಪನ್ನಗಳನ್ನು ಮುಖ್ಯವಾಹಿನಿಗೆ ತರಲು ಜಾಗತಿಕ ಮಟ್ಟದಲ್ಲಿ ಉತ್ತಮ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ನಗರದ ಅರಮನೆ ಮೈದಾನದಲ್ಲಿ ಇಂದು ಆಯೋಜಿಸಲಾಗಿದ್ದ ಸಿರಿಧಾನ್ಯ ಹಾಗೂ ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊರದಿಂದ ಸಿರಿಧ್ಯಾನಗಳನ್ನು ರೈತರ ಪ್ರತಿಕೃತಿಯ ಬುಟ್ಟಿಗೆ ಸುರಿಯುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಸಿರಿಧಾನ್ಯ ಹಾಗೂ ಸಾವಯವ ವಸ್ತುಗಳ ಮಳಿಗೆಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಮಾತನಾಡಿದ ಅವರು, ಸಿರಿಧಾನ್ಯ ಆಹಾರ ಪ್ರೋತ್ಸಾಹಿಸಲು ಇಂದಿರಾ ಕ್ಯಾಂಟೀನ್ ಮತ್ತು ಮಧ್ಯಾಹ್ನದ ಶಾಲಾ ಊಟದಲ್ಲಿ ಸಿರಿಧಾನ್ಯ ಬಳಕೆ ಮಾಡಲಾಗುವುದು. ಅದೇ ರೀತಿ ಪಡಿತರ ಅಂಗಡಿಗಳಲ್ಲಿ ಸಿರಿಧಾನ್ಯಗಳನ್ನು ವಿತರಿಸಲಾಗುವುದು. ರಾಜ್ಯದ ಜನರು ಮತ್ತು ಶಾಲಾ ಮಕ್ಕಳು ಇನ್ನಷ್ಟು ಸದೃಢ ಆರೋಗ್ಯವಂತರಾಗಲು ಇಂದಿರಾ ಕ್ಯಾಂಟೀನ್ ಮತ್ತು ಶಾಲಾ ಊಟದಲ್ಲಿ ಸಿರಿಧಾನ್ಯ ಬಳಸುವ ಸಂಬಂಧ ಸದ್ಯದಲ್ಲೇ ಸಂಬಂಧಪಟ್ಟ ಇಲಾಖೆಗಳ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಸಿರಿಧಾನ್ಯ ಬೆಳೆ ಕೇಂದ್ರ ಸ್ಥಾಪನೆ:ಉತ್ತಮ ಗುಣಮಟ್ಟದ ಸಿರಿಧಾನ್ಯ ಬೀಜ ಉತ್ಪಾದನೆ, ಹೊಸ ತಳಿ ಅಭಿವೃದ್ಧಿ ಹಾಗೂ ಸಿರಿಧಾನ್ಯ ರಫ್ತಿಗೆ ಅನುಕೂಲ ಆಗುವಂತ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹದಾಯಕವಾಗಿ ಅಗತ್ಯ ಕೇಂದ್ರವನ್ನು ರಾಜ್ಯ ಸರ್ಕಾರ ಸ್ಥಾಪಿಸಲಿದೆ ಎಂದು ಸಿಎಂ ಹೇಳಿದರು.
ಎಲ್ಲಿ ಮಳೆ ಕಡಿಮೆ ಬೀಳುತ್ತದೆಯೋ, ಭೂಮಿಯ ಫಲವತ್ತತೆ ಕಡಿಮೆ ಇರುವ ಪ್ರದೇಶಗಳಲ್ಲೂ ಬೆಳೆಯಬಹುದಾದ ಸಿರಿಧಾನ್ಯ ಆರೋಗ್ಯಕ್ಕೆ ಬಹಳ ಸಹಕಾರಿ. ಇದಕ್ಕಾಗಿ ರಾಜ್ಯ ಸರ್ಕಾರ ನಿರಂತರವಾಗಿ ಸಿರಿಧಾನ್ಯ ಮೇಳವನ್ನು ನಿರಂತರವಾಗಿ ಆಯೋಜಿಸುತ್ತಿದೆ ಎಂದು ತಿಳಿಸಿದರು.
ಸಾರಜನಕ, ಲವಣ, ವಿಟಮಿನ್ ಮತ್ತು ನಾರಿನ ಅಂಶಗಳು ಸಿರಿಧಾನ್ಯಗಳಲ್ಲಿ ಹೆಚ್ಚಾಗಿವೆ. ಇವತ್ತಿನ ಹಲವು ಕಾಯಿಲೆಗಳಿಗೆ ರಸಾಯನಿಕ ಮಿಶ್ರಿತ ಆಹಾರ ಪದಾರ್ಥ ಸೇವನೆ ಕೂಡ ಒಂದು ಪ್ರಮುಖ ಕಾರಣವಾಗಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಇದಕ್ಕೆ ಸಾವಯವ ಸಿರಿಧಾನ್ಯ ಸೇವನೆ ಉತ್ತಮ ಪರಿಹಾರ ಆಗುತ್ತಿದೆ ಎಂದರು.
ಪರಿಷ್ಕೃತ ಸಾವಯವ ಕೃಷಿ ನೀತಿ ಜಾರಿ:2004ರಲ್ಲಿ ಸಾವಯವ ಕೃಷಿ ನೀತಿ, 2014ರಲ್ಲಿ ಪರಿಷ್ಕೃತ ಸಾವಯವ ಕೃಷಿ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಆ ಮೂಲಕ ಸಾವಯವ ಮತ್ತು ಸಿರಿಧಾನ್ಯ ಬೆಳೆ ಬೆಳೆಯಲು ನಮ್ಮ ಸರ್ಕಾರ ನಿರಂತರವಾಗಿ ಉತ್ತೇಜನ ನೀಡುತ್ತಿದೆ. ಇದರಿಂದ ಜನರ ಆರೋಗ್ಯಕ್ಕೂ ಬಹಳ ಸಹಕಾರಿಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸಾವಯವ ಮತ್ತು ಸಿರಿಧಾನ್ಯ ಹೆಚ್ಚು ಜನಪ್ರಿಯ ಆಗುತ್ತಿದೆ. ಭಾರತ ಕೃಷಿ ಪ್ರಧಾನ ದೇಶವಾದ್ದರಿಂದ ಆಹಾರ ಸ್ವಾವಲಂಬನೆ ಸಾಧಿಸಲು ಹಸಿರು ಕ್ರಾಂತಿ ನಡೆಸಲಾಯಿತು. ಈ ಮೂಲಕ ಪ್ರತಿಯೊಬ್ಬರಿಗೂ ಆಹಾರ ಒದಗಿಸಲು ನೆರವಾಯಿತು.
ಕೃಷಿ ಪ್ರಧಾನ ಹೆಚ್ಚು ಜನಸಂಖ್ಯೆಯಿರುವ ದೇಶದಲ್ಲಿ ಕೃಷಿ ಮೇಲೆ ಹೆಚ್ಚು ಅವಲಂಬನೆ ಹಿನ್ನೆಲೆಯಲ್ಲಿ ಹಸಿರು ಕ್ರಾಂತಿ ಮಾಡಲಾಗಿತ್ತು. ಈ ವೇಳೆ ಹೆಚ್ಚು ರಾಸಾಯನಿಕಗಳನ್ನು ಬಳಸಲಾಗಿತ್ತು. ಇದರಿಂದ ಸಿರಿಧಾನ್ಯಗಳ ಬೆಳೆ ಕುಂಠಿತವಾಗಿತ್ತು. ಮತ್ತೆ ಸಿರಿಧಾನ್ಯಗಳು ಮುನ್ನೆಲೆಗೆ ಬಂದಿರುವುದು ಸಂತಸವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.