ಬೆಂಗಳೂರು: ನಗರದಲ್ಲಿ ಖಾಕಿ ಪಡೆ ರೌಡಿಗಳ ಮೇಲೆ ಎಷ್ಟೇ ಹದ್ದಿನ ಕಣ್ಣಿಟ್ಟಿದ್ದರೂ ದಿನದಿಂದ ದಿನಕ್ಕೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ ಕೆಜಿ ಹಳ್ಳಿಯ ಸಂಡೇ ಮಾರ್ಕೆಟ್ ರೋಡ್‌ನಲ್ಲಿ ಮಾರಕಾಸ್ತ್ರಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ.
ಪೂರ್ವ ವಿಭಾಗದ ಡಿಸಿಪಿ, ಶರಣಪ್ಪ ಮಾತನಾಡಿದರು ರವಿ ಎಂಬಾತ ಹಲ್ಲೆಗೊಳಗಾದ ವ್ಯಕ್ತಿ. ಕೆಜಿ ಹಳ್ಳಿಯ ಸಂಡೇ ಮಾರ್ಕೆಟ್ ರೋಡ್‌ನಲ್ಲಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರವಿ ಹಾಲು ವ್ಯಾಪಾರ ಮಾಡುತ್ತಿದ್ದ. ಮಧ್ಯಾಹ್ನ ಅಂಗಡಿ ಬಳಿ ಟಿ ಕುಡಿಯುತ್ತಿದ್ದ ವೇಳೆ ರವಿಗೆ ಕರೆ ಮಾಡಿರುವ ದುಷ್ಕರ್ಮಿಗಳು ನಿರ್ಜನ ಪ್ರದೇಶಕ್ಕೆ ಬರುವಂತೆ ತಿಳಿಸಿದ್ದಾರೆ.
ನಂತರ ಸ್ಥಳಕ್ಕೆ ಹೋದ ರವಿ ಮೇಲೆ ಮೊದಲೇ ಹೊಂಚು ಹಾಕಿ ಕಾಯುತ್ತಿದ್ದ ಆರೋಪಿಗಳು ದಾಳಿ ನಡೆಸಿದ್ದಾರೆ. ಈ ವೇಳೆ,ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರವಿಯನ್ನು ಸುಮಾರು 50 ಮೀಟರ್ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ತೀವ್ರ ಗಾಯಗೊಂಡ ಅವರನ್ನು ಅಂಬೇಡ್ಕರ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ರವಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ರವಿ ಬಾಣಸವಾಡಿ ನಿವಾಸಿ ಎಂಬುದು ತಿಳಿದು ಬಂದಿದೆ. ಈ ಹಿಂದೆ ಈತ ಯಾವುದೇ ಪ್ರಕರಣ ಹೊಂದಿರಲಿಲ್ಲ. ಹೀಗಾಗಿ ಉದ್ದೇಶ ಪೂರ್ವಕವಾಗಿ ಕರೆಸಿ ಕೊಲೆ ಮಾಡಲಾಗಿದೆ ಎಂದು ಊಹಿಸಲಾಗಿದೆ. ಕೆಜಿ ಹಳ್ಳಿ ಪೊಲೀಸರು ಹಲ್ಲೆ ನಡೆಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ರವಿ ಮೇಲೆ ಹಲ್ಲೆ ನಡೆದಿದ್ದೇಕೆ? ಹಲ್ಲೆ ಮಾಡಿದವರು ಯಾರು? ರವಿ ಹಾಗೂ ಹಲ್ಲೆ ಮಾಡಿದವರಿಗೂ ಏನು ಸಂಬಂಧ? ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.
ಓದಿ:ರಾಜ್ಯದಲ್ಲಿಂದು 1217 ಮಂದಿಗೆ COVID ದೃಢ; 25 ಮಂದಿ ಸಾವು