ಬೆಂಗಳೂರು:ರಾಜ್ಯದಲ್ಲಿ ಕೋಟ್ಯಂತರ ಗ್ರಾಹಕರನ್ನು ಹೊಂದಿರುವ ನಂದಿನಿ ಹಾಲಿನ ಉತ್ಪನ್ನಗಳ ಬೆಲೆಯನ್ನು ಕೆಎಂಎಫ್ ಆಡಳಿತ ಮಂಡಳಿಯು ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯದೇ ಏಕಪಕ್ಷೀಯವಾಗಿ ಹೆಚ್ಚಳ ಮಾಡುತ್ತಿರುವುದು ಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತು ಕೆಎಂಎಫ್ ನಡುವೆ ಬೆಲೆ ಎರಿಕೆ ಬಗ್ಗೆ ಕ್ಷೀರ ಸಮರ ನಡೆಯುತ್ತಿರುವುದನ್ನು ಖಚಿತಪಡಿಸಿದೆ.
ಸಾಮಾನ್ಯವಾಗಿ ಬೆಲೆ ಏರಿಕೆ ಮಾಡುವ ಮುನ್ನ ಕೆಎಂಎಫ್ ಆಡಳಿತ ಮಂಡಳಿ ರಾಜ್ಯ ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟು ಒಪ್ಪಿಗೆ ಪಡೆದು ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಹೆಚ್ಚಳ ಮಾಡುವುದು ರೂಢಿಯಲ್ಲಿದೆ. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರದ ಅನುಮತಿ ಪಡೆಯದೇ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳವು ಬೆಲೆ ಏರಿಕೆ ಕುರಿತು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುತ್ತಿರುವುದು ಕೆಎಂಎಫ್ ಮತ್ತು ರಾಜ್ಯ ಸರ್ಕಾರದ ನಡುವೆ ಸಮನ್ವಯತೆ ಕೊರತೆ ಇರುವುದನ್ನು ತೋರಿಸುತ್ತದೆ.
ನಂದಿನಿ ಹಾಲು ಮತ್ತು ಮೊಸರಿನ ಬೆಲೆಯನ್ನು ಪ್ರತಿ ಲೀಟರ್ಗೆ 3 ರೂಪಾಯಿ ಹೆಚ್ಚಳ ಮಾಡಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಆದೇಶಿಸಿರುವುದು ಮತ್ತು ಈ ಆದೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣವೇ ದರ ಏರಿಕೆ ಜಾರಿಗೆ ಬರದಂತೆ ಅದಕ್ಕ ತಡೆ ನೀಡಿರುವುದು ಒಂದೇ ಪಕ್ಷದ ಆಡಳಿತ ವೇದಿಕೆಗಳಲ್ಲಿ ಸಮನ್ವಯದ ಕೊರತೆ ಇರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಲಾಗುತ್ತಿದೆ.
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಹಾಗೂ ಅಗತ್ಯ ಬೆಲೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬೇಸತ್ತಿರುವಾಗ ಹಾಲಿನಂತಹ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿದರೆ ಬಿಜೆಪಿ ಪಕ್ಷ ಮತ್ತು ಬಿಜೆಪಿ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವ ಆತಂಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದ್ದಾಗಿದೆ.
ಈ ಕಾರಣದಿಂದಲೇ ಮುಖ್ಯಮಂತ್ರಿ ಬೊಮ್ಮಾಯಿಯವರು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಲೆ ಏರಿಕೆ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ಮಧ್ಯಪ್ರವೇಶಿಸಿ ನಂದಿನಿ ಹಾಲು - ಮೊಸರು ಬೆಲೆ ಹೆಚ್ಚಳಕ್ಕೆ ಬ್ರೇಕ್ ಹಾಕಿದ್ದಾರೆ. ಕೆಎಂಎಫ್ ಆಡಳಿತ ಮಂಡಳಿ ಜತೆ ಸಮಾಲೋಚಿಸಿ ಈ ತಿಂಗಳ 20 ರ ನಂತರ ಬೆಲೆ ಏರಿಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಒಪ್ಪಿಗೆ ಇಲ್ಲದೆ ನಂದಿನಿ ಉತ್ಪನ್ನಗಳ ಬೆಲೆ ಹೆಚ್ಚಳ ಮಾಡುತ್ತಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೇಸರಗೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಇದೇ ಮೊದಲಲ್ಲ...ಕೆಎಂಎಫ್ ಹಾಲು - ಮೊಸರು ದರವನ್ನು ಏಕಪಕ್ಷೀಯವಾಗಿ ಹೆಚ್ಚಳ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವಾರು ಬಾರಿ ಹೆಚ್ಚಳ ಮಾಡಿದೆ. ದರ ಏರಿಕೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ಮತ್ತು ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಬೆಲೆ ಏರಿಕೆ ಪ್ರಮಾಣ ಕಡಿಮೆ ಮಾಡಿದ ನಿದರ್ಶನಗಳು ಸಾಕಷ್ಟಿವೆ.
ಕಳೆದ ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರ ಪ್ಯಾಕ್ಡ್ ಮೊಸರು ಮತ್ತು ಮಜ್ಜಿಗೆ, ಲಸ್ಸಿ ಸೇರಿದಂತೆ ನಂದಿನಿ ಡೈರಿ ಉತ್ಪನ್ನಗಳಿಗೆ ಜಿಎಸ್ಟಿ ದರ ಹೆಚ್ಚಳ ಮಾಡಿರುವುದನ್ನು ಸರಿದೂಗಿಸಲು ಕರ್ನಾಟಕ ಹಾಲು ಉತ್ಪಾದಕರ ಮಂಡಳಿಯು ಮೊಸರು, ಮಜ್ಜಿಗೆ, ಲಸ್ಸಿ ಮತ್ತು ನಂದಿನಿ ಡೈರಿ ಉತ್ಪನ್ನಗಳ ಬೆಲೆಯನ್ನು 2 ರಿಂದ 3 ರೂಪಾಯಿ ಹೆಚ್ಚಳ ಮಾಡಿತ್ತು.