ಬೆಂಗಳೂರು: ರಾಜ್ಯದ ಹಾಲು ಒಕ್ಕೂಟಗಳು ಎಲ್ಲ ಕಡೆಗಳಲ್ಲಿ ಹಾಲಿನ ದರ 3 ರೂ ಹೆಚ್ಚಿಸುವ ತೀರ್ಮಾನ ಆಗಿದೆ. ಈ ಬಗ್ಗೆ ಸಿಎಂ ಜೊತೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಹಾಲಿನ ದರ ಹೆಚ್ಚಳ ಚರ್ಚೆ: ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಎಸ್. ರವಿ ಗಮನ ಸೆಳೆದ ಹಿನ್ನೆಲೆ ಉತ್ತರ ನೀಡಿದ ಸೋಮಶೇಖರ್, ಈಗಾಗಲೇ ಹಾಲು ಒಕ್ಕೂಟದ ಮನವಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಗಮನಕ್ಕೆ ತರಲಾಗಿದೆ. ನಾನು ಸಮಾಲೋಚಿಸುತ್ತೇನೆ. ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇನೆ. ಹೆಚ್ಚಿಸಿದ ಬೆಲೆ ರೈತರಿಗೆ ನೀಡುವ ಭರವಸೆ ಸಹ ಒಕ್ಕೂಟ ನೀಡಿದೆ. ಇದರಿಂದ ಬೇಗ ಕ್ರಮ ಆಗಲಿದೆ ಎಂದು ಭರವಸೆ ನೀಡಿದರು.
ರವಿ ಮಾತನಾಡಿ, ಕೋವಿಡ್ ಮುನ್ನ 20 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡುತ್ತಿದ್ದೆವು. 12 ಲಕ್ಷ ಲೀಟರ್ ಮಾರಾಟ ಆಗುತ್ತಿತ್ತು. ಉಳಿದದ್ದು ಹಾಲಿನ ಪುಡಿ ಹಾಗೂ ಉಪ ಉತ್ಪನ್ನ ಮಾಡಿದೆವು. ಕೋವಿಡ್ ಸಂದರ್ಭ ಕೇವಲ ಐದು ಲಕ್ಷ ಲೀಟರ್ ಹಾಲು ಮಾತ್ರ ಮಾರಾಟವಾಯಿತು. ಆಗ ಉಳಿದ ಹಾಲನ್ನು ಉಪ ಉತ್ಪನ್ನವಾಗಿ ಪರಿವರ್ತಿಸಿ ಒಕ್ಕೂಟವನ್ನು ಜೀವಂತವಾಗಿರಿಸಿದೆ.