ಕರ್ನಾಟಕ

karnataka

ETV Bharat / state

ಭ್ರಷ್ಟ ಬಿಜೆಪಿ ಸರ್ಕಾರದಿಂದ ರಾಜ್ಯದ ಹಾಲು ಉತ್ಪಾದಕರು ಹಾಗೂ ಗ್ರಾಹಕರಿಗೆ ಕುತ್ತು: ಸಿದ್ದರಾಮಯ್ಯ - farmers

ಪ್ರತಿ ದಿನ ಸುಮಾರು 28 ಲಕ್ಷ ಲೀಟರುಗಳಷ್ಟು ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯದ ಪಶುಪಾಲಕರಿಗೆ ನಿತ್ಯ ಸುಮಾರು 11 ಕೋಟಿ ರೂಪಾಯಿಗಳಷ್ಟು ಹಣ ಕೈತಪ್ಪಿ ಹೋಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

milk-producing-farmers-are-being-stung-by-the-corrupt-bjp-siddaramaiah
ಭ್ರಷ್ಟ ಬಿಜೆಪಿ ಸರ್ಕಾರದಿಂದ ರಾಜ್ಯದ ಹಾಲು ಉತ್ಪಾದಕ ರೈತರು ಹಾಗೂ ಗ್ರಾಹಕರಿಗೆ ಕುತ್ತು: ಸಿದ್ದರಾಮಯ್ಯ

By

Published : Mar 8, 2023, 4:08 PM IST

ಬೆಂಗಳೂರು: ರಾಜ್ಯದ ಹಾಲು ಉತ್ಪಾದಕ ರೈತರು ಹಾಗೂ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಭ್ರಷ್ಟ ಬಿಜೆಪಿಯೇ ನೇರ ಕಾರಣ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಈ ಮಾರ್ಚ್‍ನಲ್ಲಿ ಪ್ರತಿ ದಿನ 99 ಲಕ್ಷ ಲೀಟರುಗಳಷ್ಟು ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71ಲಕ್ಷ ಲೀಟರುಗಳಷ್ಟು ಹಾಲನ್ನು ಮಾತ್ರ ಕೆಎಂಎಫ್ ಸಂಗ್ರಹಿಸುತ್ತಿದೆ. ಇದು ಕೂಡ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಪ್ರಸ್ತುತ ಪ್ರತಿ ದಿನ ಸುಮಾರು 28 ಲಕ್ಷ ಲೀಟರುಗಳಷ್ಟು ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯದ ಪಶುಪಾಲಕರಿಗೆ ಪ್ರತಿ ದಿನ ಸುಮಾರು 11 ಕೋಟಿ ರೂಪಾಯಿಗಳಷ್ಟು ಹಣ ಕೈತಪ್ಪಿ ಹೋಗುತ್ತಿದೆ.

ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಸಂಸಾರಗಳನ್ನು ನಡೆಸಲು ಹೈನುಗಾರಿಕೆ ಒಂದು ಪ್ರಮುಖ ಸಾಧನವಾಗಿತ್ತು. ಇದಕ್ಕೆ ಯಾರು ಹೊಣೆ? ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಮತ್ತು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರಗಳ ಹಾದಿ ತಪ್ಪಿದ ಅಡ್ಡ ಕಸುಬಿ ನೀತಿಗಳೇ ನೇರ ಕಾರಣ ಇದಕ್ಕೆ ಕಾರಣವಲ್ಲವೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಂತಾಗಿದೆ: ಪತ್ರಿಕೆಗಳು ವರದಿ ಮಾಡಿರುವಂತೆ ರಾಜ್ಯದ ರೈತರು ಹಸುಗಳನ್ನು ವ್ಯಾಪಕವಾಗಿ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಚರ್ಮಗಂಟು ಕಾಯಿಲೆ ಕೂಡ ಲಕ್ಷಾಂತರ ಜಾನುವಾರುಗಳನ್ನು ರೋಗಗ್ರಸ್ತವಾಗುವಂತೆ ಮಾಡಿದೆ. ಸುಮಾರು 32,000 ಜಾನುವಾರುಗಳು ಈ ರೋಗದಿಂದ ಮರಣ ಹೊಂದಿವೆ. ಗುಜರಾತ್ ಮೂಲದ ರಾಜಕಾರಣಿಗಳು ಮತ್ತು ವ್ಯಾಪಾರಿಗಳ ಕಣ್ಣು ನಮ್ಮ ಕೆಎಂಎಫ್ ಮೇಲೆ ಬಿದ್ದಾಗಿನಿಂದ ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಂತಾಗಿದೆ. ಇವರಿಂದಾಗಿ ರಾಜ್ಯದ ರೈತರಿಗೂ ಸಂಕಷ್ಟ ಬಂದೊದಗಿದೆ. ಕೊಳ್ಳುವ ಗ್ರಾಹಕರೂ ವಿಪರೀತ ಸಂಕಷ್ಟ ಅನುಭವಿಸುತ್ತಿದ್ದಾರೆ.

ಬಿಜೆಪಿಯ ದುಷ್ಟ ಆಡಳಿತದಿಂದಾಗಿ ನಮ್ಮ ನಾಡಿನ ಪ್ರತಿಷ್ಠಿತ ಸಂಸ್ಥೆಯಾದ ಕೆಎಂಎಫ್‍ಗೆ ಇಂದು ಈ ಗಂಡಾಂತರ ಬಂದೊದಗಿದೆ. ಕೇಂದ್ರದ ಮೋದಿ ಸರ್ಕಾರ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‍ಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ತಯಾರಿ ನಡೆಸಿತ್ತು. ರೈತರು ವಿರೋಚಿತ ಪ್ರತಿಭಟಿಸಿದ ಕಾರಣದಿಂದ ತಾತ್ಕಾಲಿಕವಾಗಿ ಮೋದಿ ಸರ್ಕಾರ ಹಿಂದೆ ಸರಿದಿದೆ ಎಂದಿದ್ದಾರೆ.

ಬೀಫ್ ಎಕ್ಸ್​ಪೋರ್ಟ್ ಪ್ರಮಾಣ ಏರಿಕೆ: ನಿಸರ್ಗ ತತ್ವದ ಪ್ರಕಾರ ಶೇ.50ರಷ್ಟು ಗಂಡು ಕರುಗಳು ಹುಟ್ಟುತ್ತವೆ. ಹಾಗಿದ್ದರೆ ಹುಟ್ಟಿದ ಗಂಡುಕರುಗಳು ಎಲ್ಲಿಗೆ ಹೋಗುತ್ತಿವೆ? ಸಬರ್‍ವಾಲ್‍ಗಳು, ಬಿಂದ್ರಾಗಳು, ಜೈನ್‍ಗಳು, ಶರ್ಮಾ ಮುಂತಾದವರು ಮಾಡುತ್ತಿರುವ ಬೀಫ್ ಎಕ್ಸ್​ಪೋರ್ಟ್ ಪ್ರಮಾಣ ಸಾವಿರಾರು ಕೋಟಿಗಳಿಗೆ ಏರಿಕೆಯಾಗಿರುವುದಾಗಿ ವರದಿಗಳಿವೆ. ಹಾಗಿದ್ದರೆ ಯಾರ ಅಭಯದಿಂದ ಇವರೆಲ್ಲ ಎಕ್ಸ್​ಪೋರ್ಟ್ ಮಾಡುತ್ತಿದ್ದಾರೆ? ಇದಕ್ಕೆಲ್ಲ ಬಿಜೆಪಿ ಸರ್ಕಾರಗಳು ಉತ್ತರ ಹೇಳಬೇಕು ಎಂದು ತಿಳಿಸಿದ್ದಾರೆ.

ಹೈನುಗಾರಿಕೆಯ ಚೈತನ್ಯ ನಾಶ:ನಮ್ಮ ರಾಜ್ಯದಲ್ಲಿ ಸುಮಾರು 25ಲಕ್ಷ ನೋಂದಾಯಿತ ಹಾಲು ಉತ್ಪಾದಕರಿದ್ದಾರೆ. ಹಾಲನ್ನು ಯಥೇಚ್ಛವಾಗಿ ಉತ್ಪಾದಿಸುತ್ತಿದ್ದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಮುಂತಾದ ಜಿಲ್ಲೆಗಳ ರೈತರೆ ಹಸುಗಳನ್ನು ಸಾಕಲು ನಿರಾಸಕ್ತಿ ತೋರಿಸುತ್ತಿದ್ದಾರೆ. ಗ್ರಾಮೀಣ ಆರ್ಥಿಕತೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವ ಹೈನುಗಾರಿಕೆಯ ಚೈತನ್ಯವನ್ನು ನಾಶ ಮಾಡಲು ಮನುವಾದಿ ಶಕ್ತಿಗಳು ಹಾಗೂ ಕಾರ್ಪೊರೇಟ್ ಶಕ್ತಿಗಳು ಒಂದಾಗಿ ಶ್ರಮಿಸುತ್ತಿವೆ.

ನಮ್ಮ ಸರ್ಕಾರ ಇದ್ದಾಗ 2013ರಿಂದ 2018ರ ಅವಧಿಯಲ್ಲಿ ಹಾಲಿಗೆ ನೀಡುವ ಪ್ರೋತ್ಸಾಹ ಧನವನ್ನು ಲೀಟರಿಗೆ 5ರೂಪಾಯಿಗಳಷ್ಟು ಹೆಚ್ಚಿಸಿದ್ದೆವು. ನಮ್ಮ ಸರ್ಕಾರದ ನಿರ್ಧಾರದಿಂದಾಗಿ 2012-13ರಲ್ಲಿ 45 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣವು 2017ರ ವೇಳೆಗೆ 73 ಲಕ್ಷ ಲೀಟರಿಗೆ [28 ಲಕ್ಷ ಲೀಟರು] ಏರಿಕೆಯಾಗಿತ್ತು. ಈಗ 2017ಕ್ಕಿಂತ 2ಲಕ್ಷ ಲೀಟರುಗಳಷ್ಟು ಕಡಿಮೆ ಹಾಲು ಪ್ರತಿ ದಿನ ಸಂಗ್ರಹವಾಗುತ್ತಿದೆ.

ಕಾಂಗ್ರೆಸ್​ ಸರ್ಕಾರದ ನೀತಿಗಳಿಂದಾಗಿ ರೈತರ ಬದುಕಿನಲ್ಲಿ ಒಂದಿಷ್ಟು ಚೈತನ್ಯ ಮೂಡಿತ್ತು. ಆದರೆ, ಬಿಜೆಪಿ ಸರ್ಕಾರ ಹಾಲು ಉತ್ಪಾದಕರಿಗೆ ನೀಡುವ ಸಹಾಯಧನವನ್ನು ಕೂಡ ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಿದೆ. 2017-18ರಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ 1356 ಕೋಟಿ ರೂಪಾಯಿಗಳನ್ನು ನಾವು ಹಾಲಿನ ಸಹಾಯಧನಕ್ಕಾಗಿ ರೈತರಿಗೆ ಕೊಟ್ಟಿದ್ದೆವು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2020-21ರಲ್ಲಿ 1186 ಕೋಟಿ ಖರ್ಚು ಮಾಡಿದ್ದರೆ 2023-24ಕ್ಕೆ ಕೇವಲ 1200 ಕೋಟಿ ರೂಪಾಯಿಗಳನ್ನು ಬಜೆಟ್‍ನಲ್ಲಿ ಒದಗಿಸಿದ್ದಾರೆ ಎಂದು ವಿವರಿಸಿದ್ದಾರೆ.

ಸರ್ಕಾರ ತನ್ನ ಪಶುಪಾಲಕ ವಿರೋಧಿ ನೀತಿಗಳಿಂದಾಗಿ ಹಾಲು ಉತ್ಪಾದಕರ ಬದುಕು ನಿರ್ನಾಮ ಮಾಡಲು ಹೊರಟಿದೆ. ಕಳೆದ 5 ವರ್ಷಗಳಲ್ಲಿ ಜಾನುವಾರುಗಳಿಗೆ ನೀಡುವ ಹಿಂಡಿ, ಬೂಸಾ ಮುಂತಾದ ಪಶು ಆಹಾರದ ಬೆಲೆಗಳು 3 ಪಟ್ಟಿಗೂ ಹೆಚ್ಚಾಗಿವೆ. 2017-18ಕ್ಕೂ ಮೊದಲು 49 ಕೆಜಿ ಬೂಸಾದ ಬೆಲೆ 450ರೂ. ಇದ್ದದ್ದು ಈಗ 1300 ರಿಂದ 1350 ರೂ.ಗಳಿಗೆ ಏರಿಕೆಯಾಗಿದೆ. 30 ಕೆಜಿ ಹಿಂಡಿಯ ಬೆಲೆ 400ರೂ ಇದ್ದದ್ದು ಈಗ 1500 ಕ್ಕೂ ಹೆಚ್ಚಾಗಿದೆ.

ಮೋದಿ ಸರ್ಕಾರದ ತೆರಿಗೆ ಕಾರಣ: ಹಾಲು ಮಾರಾಟದಿಂದಲೂ ನಷ್ಟ ಅನುಭವಿಸುತ್ತಿದ್ದಾರೆ. ಆದರೂ ಹಿಂಡಿ, ಬೂಸಾ ಬೆಲೆ ಗಗನ ಮುಟ್ಟಿದೆ. ಇದಕ್ಕೆ ಮುಖ್ಯ ಕಾರಣ ಪೆಟ್ರೋಲ್, ಡೀಸೆಲ್ ಮೇಲಿನ ಮೋದಿ ಸರ್ಕಾರದ ತೆರಿಗೆ ಕಾರಣ. ಬೆಲೆ ಏರಿಕೆ ಕಾರಣ ಹಾಗೂ ರಸ್ತೆಗಳ ಟೋಲ್​ಗಳಲ್ಲಿ ವಿಪರೀತ ಸುಂಕ ವಸೂಲಿ ಮಾಡಿ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸುವಲ್ಲಿ ಮೋದಿ ಸರ್ಕಾರದ ಪಾತ್ರ ದೊಡ್ಡದು. ಇದೆಲ್ಲ ಸಾಲದು ಎಂದು ಹೇಳಿ ಹಿಂಡಿಗೆ ಶೇ.5ರಷ್ಟು ಜಿಎಸ್‍ಟಿಯನ್ನು ವಿಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಮೃತ್ ಮಹಲ್ ಕಾವಲು: ಇದರ ಜೊತೆಯಲ್ಲಿ ಈ ದುಷ್ಟ ಬಿಜೆಪಿ ಸರ್ಕಾರ ಸರ್ಕಾರಿ ಕಾವಲು ಜಮೀನುಗಳನ್ನು, ಡಿನೋಟಿಫೈ ಮಾಡಿ ಉಳ್ಳವರಿಗೆ, ಆರ್​ಎಸ್​ಎಸ್​ರವರಿಗೆ, ಬಂಡವಾಳಿಗರಿಗೆ ಹಂಚಲು ಪ್ರಾರಂಭಿಸಿದೆ. ಟಿಪ್ಪುಸುಲ್ತಾನನ ದೂರದೃಷ್ಟಿಯ ಕಾರಣದಿಂದ ಹಳೆ ಮೈಸೂರು ಭಾಗದಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ‘ಅಮೃತ್ ಮಹಲ್ ಕಾವಲು’ಗಳೆಂದು ಮೀಸಲಿರಿಸಲಾಗಿತ್ತು. ಇದರಲ್ಲಿ ಚಿತ್ರದುರ್ಗ ಜಿಲ್ಲೆಯೊಂದರಲ್ಲೆ 23,189 ಎಕರೆಗೂ ಹೆಚ್ಚಿನ ಭೂಮಿಯನ್ನು ಅಮೃತ್ ಮಹಲ್ ಕಾವಲ್ ಎಂದು ಕಾಯ್ದಿರಿಸಿದ್ದ. ಬ್ರಿಟಿಷ್ ಸರ್ಕಾರ, ಮೈಸೂರು ಅರಸರ ಆಡಳಿತಗಳೂ ಕೂಡ ಕಾವಲುಗಳನ್ನು ಕಾಪಾಡಿಕೊಂಡು ಬಂದಿದ್ದವು.

ಚಿತ್ರದುರ್ಗದ ಪಶುಪಾಲಕರ ಬೆನ್ನಿಗೆ ಇರಿಯಲು ನಿಂತಿರುವ ಈ ಸರ್ಕಾರ ಸಾವಿರಗಟ್ಟಲೆ ಎಕರೆಗಳನ್ನು ಡಿನೋಟಿಫೈ ಮಾಡಲು ಮುಂದಾಗಿದೆ. ಇದು ಅಕ್ಷಮ್ಯ. ಜಾನುವಾರುಗಳ ಸಂರಕ್ಷಣೆ ಮತ್ತು ಅವುಗಳಿಗೆ ಆಹಾರವಿಲ್ಲದಂತೆ ಮಾಡುವುದು ಇವೆರಡೂ ಸಹ ಎಂದಿಗೂ ಜೊತೆಯಾಗಿ ಸಾಗಲು ಸಾಧ್ಯವಿಲ್ಲ. ಆದರೂ ಜನದ್ರೋಹಿಯಾದ ಬಿಜೆಪಿ ಹುಲ್ಲುಗಾವಲುಗಳನ್ನು ಜನರಿಂದ ಕಿತ್ತುಕೊಳ್ಳಲು ಮುಂದಾಗಿದೆ ಎಂದು ತಿಳಿಸಿದ್ದಾರೆ.

ನಮ್ಮ ರೈತರ ಜಾನುವಾರುಗಳು ಮೇಯಲು ಜಾಗ ಇಲ್ಲದಂತಾಗಿದೆ. ಇದನ್ನು ಕೂಡಲೆ ನಿಲ್ಲಿಸಿ ರಾಜ್ಯದಲ್ಲಿರುವ ಎಲ್ಲ ಮೇವಿನ ಕ್ಷೇತ್ರಗಳನ್ನು ಉಳಿಸಬೇಕು. ಸರ್ಕಾರ ಕೂಡಲೆ ಮಧ್ಯ ಪ್ರವೇಶಿಸಿ ರೈತರು ಮತ್ತು ಗ್ರಾಹಕರ ಇಬ್ಬರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ಸಮಸ್ಯೆಗಳನ್ನು ಪರಿಹರಿಸಬೇಕು. ಪಶುಭಾಗ್ಯ ಯೋಜನೆಯನ್ನು ಸಶಕ್ತಗೊಳಿಸಬೇಕು. ಹಿಂಡಿ ಬೂಸಾ ಸೇರಿದಂತೆ ಎಲ್ಲ ಪಶು ಆಹಾರಗಳ ಬೆಲೆಯನ್ನು ಕಡಿಮೆ ಮಾಡಿ ರಿಯಾಯಿತಿ ದರದಲ್ಲಿ ಒದಗಿಸಬೇಕು. ಹಿಂಡಿಯ ಮೇಲಿನ ಜಿಎಸ್‍ಟಿಯನ್ನು ಕೂಡಲೇ ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿಯಿಂದ ಹೋಗುವವರನ್ನು ಗೌರವಯುತವಾಗಿ ಕಳುಹಿಸಿಕೊಡ್ತೇವೆ: ಯಡಿಯೂರಪ್ಪ

ABOUT THE AUTHOR

...view details