ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಕಾರಣದಿಂದಾಗಿ ಲಾಕ್‌ಡೌನ್ ಘೋಷಿಸಲಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯಿಂದಾಗಿ ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನ ಕೂಡ ತೆಗೆದುಕೊಂಡಿದೆ.
ಒಂದೆಡೆ ಹಾಲಿನ ಉತ್ಪಾದನೆ ಹೆಚ್ಚಳವಾಗಿದೆ, ಮತ್ತೊಂದೆಡೆ ಹಾಲು ಮಾರಾಟವಾಗದ ಕಾರಣ ಹಾಲು ಒಕ್ಕೂಟಗಳು ಆರ್ಥಿಕವಾಗಿ ಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಬೆಂಗಳೂರು ಹಾಲು ಒಕ್ಕೂಟ ರೈತರಿಂದ ಖರೀದಿಸುವ ಹಾಲಿನ ದರ ಕಡಿತಗೊಳಿಸಲು ಮುಂದಾಗಿದೆ.
ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿದ್ದಾರೆ ರಾಜ್ಯದ 14 ಒಕ್ಕೂಟಗಳಲ್ಲೂ ಹಾಲು ಉತ್ಪಾದನೆ ಹೆಚ್ಚಳವಾಗಿದೆ. ಕಳೆದ 15 ದಿನಗಳ ಹಿಂದೆ 70 ಲಕ್ಷ ಲೀಟರ್ ಹಾಲು ಒಕ್ಕೂಟಗಳಿಗೆ ರೈತರು ಪೂರೈಸುತ್ತಿದ್ದರು. ಈಗ ಈ ಪ್ರಮಾಣ 82 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ.
ಜೊತೆಗೆ ಲಾಕ್‌ಡೌನ್ ಪರಿಣಾಮದಿಂದಾಗಿ ಹೋಟೆಲ್ನ ಪಾರ್ಸೆಲ್ ವ್ಯವಸ್ಥೆ ಹೊರತುಪಡಿಸಿ ಅಲ್ಲಿಯೇ ಕುಳಿತು ಆಹಾರ ಸೇವಿಸುವ ವ್ಯವಸ್ಥೆಯನ್ನ ಲಾಕ್‌ಡೌನ್‌ನಿಂದಾಗಿ ಬಂದ್ ಮಾಡಲಾಗಿದೆ. ಹೀಗಾಗಿ ಲಾಕ್‌ಡೌನ್ ಕಾರಣದಿಂದ ಹಾಲನ್ನು ದೊಡ್ಡ ಮಟ್ಟದಲ್ಲಿ ವಾಣಿಜ್ಯ ಉಪಯೋಗಕ್ಕೆ ಖರೀದಿಯಾಗುವುದು ಕೂಡ ಕಡಿಮೆಯಾಗಿದೆ. ಇದರಿಂದಾಗಿ 30 ಲಕ್ಷ ಲೀಟರ್ ಹಾಲನ್ನ, ಹಾಲಿನ ಪೌಡರ್‌ನ್ನಾಗಿಸಲಾಗುತ್ತಿದೆ. ಹೀಗಾಗಿ ಹಾಲಿನ ಪುಡಿಯ ದರ ಕೂಡ ಕಡಿಮೆಯಾಗಿದೆ.
ಬೆಂಗಳೂರು ಹಾಲು ಒಕ್ಕೂಟದಲ್ಲಿ ದಿನಕ್ಕೆ 150 ಲಕ್ಷ ನಷ್ಟವಾಗುತ್ತಿದೆ. ರಾಜ್ಯದ ಬೇರೆ ಒಕ್ಕೂಟಗಳ ಪರಿಸ್ಥಿತಿಯೂ ಇದೇ ಆಗಿದೆ. ಹೀಗಾಗಿ, ಹಾಲು ಖರೀದಿ ದರ ಕಡಿಮೆ ಮಾಡುವುದು ಅನಿವಾರ್ಯವಾಗಿದೆ ಅಂತ ಕೆಎಂಎಫ್ ಅಧಿಕಾರಿಗಳು ಯೋಚಿಸಿದ್ದಾರೆ.
ಬಮೂಲ್‌ನಲ್ಲಿ ದಿನಕ್ಕೆ 18 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಇದರಲ್ಲಿ ಕೇವಲ 9 ಲಕ್ಷ ಲೀಟರ್ ಮಾತ್ರ ಮಾರಾಟವಾಗುತ್ತಿದೆ. ಉಳಿದ 9 ಲಕ್ಷ ಲೀಟರ್ ಪುಡಿಯಾಗಿ ಪರಿವರ್ತನೆಯಾಗುತ್ತಿದೆ. ಪುಡಿಯಾಗಿ ಪರಿವರ್ತನೆ ಮಾಡುವುದರಿಂದ ಲೀಟರ್‌ಗೆ 5 ರೂಪಾಯಿ ನಷ್ಟವಾಗುತ್ತಿದೆ.
ಇದರಿಂದಾಗಿ ಬೇರೆ ದಾರಿ ಇಲ್ಲದೇ ರೈತರಿಂದ ಖರೀದಿಸುವ ದರವನ್ನು ಲೀಟರ್‌ಗೆ 1.50ರೂಪಾಯಿ ಕಡಿಮೆ ಮಾಡಬೇಕಾಗಿದೆ. ಜೂನ್ 1ರಿಂದ ಹೊಸ ಖರೀದಿ ದರ ಜಾರಿಗೆ ಬರಲಿದೆ. ಜೊತೆಗೆ ಲಾಕ್‌ಡೌನ್ ಪ್ಯಾಕೇಜ್ ಘೋಷಣೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹಾಲು ಉತ್ಪಾದಕ ರೈತರನ್ನು ಮರೆತಿದ್ದಾರೆ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ರೈತರಿಗೆ ನೆರವಾಗಬೇಕು ಎಂದು ನರಸಿಂಹಮೂರ್ತಿ ಒತ್ತಾಯಿಸಿದ್ದಾರೆ.
ಓದಿ:ಲಸಿಕೆ ಕೊರತೆ ವಾಸ್ತವಾಂಶ ತಿಳಿಸಲು ಶ್ವೇತಪತ್ರ ಹೊರಡಿಸಿ: ಹೈಕೋರ್ಟ್ ನಿರ್ದೇಶನ